ಉಡುಪಿ: ಭಾಷೆಯ ಗಡಿಗಳನ್ನು ದಾಟಿ ಕರಾವಳಿಯ ಜನಪ್ರಿಯ ಜಾನಪದ ಕಲೆ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಇದೀಗ ಉಡುಪಿಗೆ ಯಕ್ಷಗಾನ ಕಲಿಯಲು ಆಗಮಿಸಿದ್ದಾರೆ. ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಮಾರ್ಗದರ್ಶನದಲ್ಲಿ ಹಿಂದಿ ಯಕ್ಷಗಾನದ ಶಿಬಿರ ನಡೆಯುತ್ತಿದೆ.
ಯಕ್ಷಗಾನಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಮನಸೋತಿದ್ದಾರೆ. ಭವಿಷ್ಯದ ಚಲನಚಿತ್ರರಂಗ ಮತ್ತು ಟಿವಿ ಪರದೆಯಿಂದ ದೂರವಿರುವ ಈ ಯುವ ಕಲಾವಿದರು 20 ದಿನಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಬನ್ನಂಜೆ ಸಂಜೀವ ಸುವರ್ಣ ಅವರು ಸಾಂಪ್ರದಾಯಿಕ ಹೆಜ್ಜೆಗಾರಿಕೆ ಕಲಿಸುವುದರ ಜೊತೆಗೆ ಯಕ್ಷಗಾನ ಪ್ರದರ್ಶನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
![ಯಕ್ಷಗಾನ ಅಭ್ಯಾಸದಲ್ಲಿ ವಾರಣಾಸಿ ವಿದ್ಯಾರ್ಥಿಗಳು](https://etvbharatimages.akamaized.net/etvbharat/prod-images/21-06-2024/21761820_tudu.jpg)
ಪ್ರತಿದಿನ ಹನ್ನೆರಡು ಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳು ಬೆವರಿಳಿಸಿ ಯಕ್ಷಗಾನದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಕಲಿಕೆಯ ಭಾಗವಾಗಿ ಕಳೆದ ಹಲವು ವರ್ಷಗಳಿಂದ ಯಕ್ಷಗಾನವನ್ನು ಒಂದು ಪಠ್ಯವಾಗಿ ಕಲಿಸಲಾಗುತ್ತದೆ.
ಇದನ್ನೂ ಓದಿ: ಶ್ರೀಧರ ಹಂದೆ, ಎಂ.ಕೆ.ರಮೇಶ್ ಆಚಾರ್ಯಗೆ ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ - Yakshamangala Award Announcement