ಬೆಂಗಳೂರು: ''ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾರೂ ಸಹ ದುರ್ವರ್ತನೆ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡುವಂತಿಲ್ಲ. ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ಮನವಿ ಎಂದಾದರೂ ಪರಿಗಣಿಸಿ, ಇಲ್ಲವೇ ಎಚ್ಚರಿಕೆ ಎಂದಾದರೂ ಪರಿಗಣಿಸಿ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸಂದೇಶ ರವಾನಿಸಿದರು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 7 ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಸರ್ಕಾರಿ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಮಾತ್ರ ಆಚರಿಸುತ್ತಿಲ್ಲ. ಖಾಸಗಿ ಕಾರ್ಯಕ್ರಮಗಳಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಖಾಸಗಿಯಾಗಿ ಹೊಸ ವರ್ಷಾಚರಣೆ ಮಾಡುವವರು ಮಾಡಿಕೊಳ್ಳಬಹುದು" ಎಂದರು.
ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು: ಪೊಲೀಸ್, ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ 11,830 ಸಿಬ್ಬಂದಿಯಿಂದ ಭದ್ರತೆ
"ಬೆಂಗಳೂರಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಡಲಾಗಿದೆ. ಹೊಸ ವರ್ಷಾಚರಣೆ ವೇಳೆ ರಾಜ್ಯದ ಗೌರವ ಹಾಗೂ ಗಾಂಭೀರ್ಯತೆಯನ್ನು ಕಾಪಾಡಬೇಕು. ವಾಣಿಜ್ಯ ಚಟುವಟಿಕೆಗಳಿಗೂ ಸಹ ನಾಳೆಯೊಳಗೆ ಮಾರ್ಗಸೂಚಿಗಳು ಬಿಡುಗಡೆಯಾಗಲಿವೆ. ಕೆಲವೊಂದಷ್ಟು ಸಡಿಲಿಕೆಗಳ ಬಗ್ಗೆಯೂ ಯೋಚಿಸಲಾಗುತ್ತಿದೆ. ಆದರೆ ಯಾವುದೇ ರೀತಿಯಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಕೆಲಸಗಳು ಆಗಬಾರದು. ಪ್ರತಿಯೊಬ್ಬರೂ ಸಹ ಕಾನೂನು ಪಾಲಿಸುವುದರ ಮೂಲಕ ಬೆಂಗಳೂರಿನ ಗೌರವ ಕಾಪಾಡಬೇಕು" ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಡಿ. 31ರ ರಾತ್ರಿ ವಿವಿಧೆಡೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು