ಬೆಂಗಳೂರು: ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಹಿಂದುಳಿದ 294 ಜಾತಿ ಸಮಾವೇಶ ಮಾಡುವ ಬಗ್ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮಾರ್ಚ್ 9ರಿಂದ ರಾಜ್ಯಾದ್ಯಂತ ಸಮಾವೇಶಗಳನ್ನು ಆಯೋಜಿಸುವ ನಿರ್ಧಾರವನ್ನು ಬಿಜೆಪಿ ಕೈಗೊಂಡಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ನಡೆಯಿತು. ಲೋಕಸಭಾ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮತ್ತು ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಓಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ''ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯಮಟ್ಟದ ಜಿಲ್ಲಾ ಪದಾಧಿಕಾರಿಗಳು, ಲೋಕಸಭಾ ಚುನಾವಣಾ ಉಸ್ತುವಾರಿಗಳ ಸಭೆ ನಡೆದಿದೆ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಹಿಂದುಳಿದ 294 ಜಾತಿಗಳ ಸಮಾವೇಶ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಮಾರ್ಚ್ 9ರಿಂದ ರಾಜ್ಯಾದ್ಯಂತ ಸಮಾವೇಶ ನಡೆಯಲಿದೆ. ಹಿಂದುಳಿದ ಸಮುದಾಯದವರಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಬದುಕು ಕಟ್ಟಿಕೊಡುವ ಕೆಲಸ ಮಾಡಲಿದೆ'' ಎಂದರು.
''ಬೂತ್, ವಾರ್ಡ್ ಹಾಗೂ ಶಕ್ತಿವಾರು ಮಟ್ಟದಲ್ಲಿ ಎಲ್ಲಾ ಸಮುದಾಯಗಳನ್ನು ನೇರವಾಗಿ ಸಂಪರ್ಕ ಮಾಡಲಾಗುತ್ತದೆ. ಸ್ವಾಭಿಮಾನಿ ಭಾರತದ ಕಲ್ಪನೆ, ಮೇಕ್ ಇನ್ ಇಂಡಿಯಾ ಹಾಗೂ ವಿಶ್ವಕರ್ಮ ಯೋಜನೆ ಎಲ್ಲವೂ ಬದುಕುಗೆ ನೆರವಾಗುವ ಯೋಜನೆಗಳಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ, ಈ ಬಾರಿ ಹಿಂದುಳಿದ ಸಮುದಾಯಗಳು ಮೋದಿ ಅವರನ್ನು ಬೆಂಬಲಿಸಲಿವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ''ಪಕ್ಷದ ಸಭೆಗಳಿಗೆ ಮಾತ್ರ ಬಂದು ಹೋಗುವ ಪದಾಧಿಕಾರಿಗಳಾಗಬಾರದು, ಪದಾಧಿಕಾರಿಗಳು ಜನನಾಯಕರಾಗಿ ರೂಪುಗೊಳ್ಳಬೇಕು. ಯಾರನ್ನೋ ಓಲೈಸಿ ಪದಾಧಿಕಾರಿ ಆಗಬಹುದು, ಅದರೆ ಜನನಾಯಕ ಆಗಲು ಸಾಧ್ಯವಿಲ್ಲ. ಅವರನ್ನು ಚೇಲಾ ಅಂತಾ ಕರೆಯುತ್ತಾರೆಯೇ ಹೊರತು ಕಾರ್ಯಕರ್ತ ಅಂತ ಅನ್ನಿಸಿಕೊಳ್ಳುವುದಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವವನು ಮಾತ್ರ ಕಾರ್ಯಕರ್ತ ಆಗುತ್ತಾನೆ. ಜನರಿಗಾಗಿ ಕೆಲಸ ಮಾಡುವವನು ಜನನಾಯಕ ಆಗುತ್ತಾನೆ'' ಎಂದರು.
''ಪದಾಧಿಕಾರಿ ಎಂಬ ಅವಕಾಶ ಉಪಯೋಗಿಸಿಕೊಂಡು ಜನಸಮೂಹದ ನಾಯಕರಾಗಬೇಕು, ನೀವು ಚೇಲಾ ಆಗಲು ಬಯಸುತ್ತೀರೋ? ನಾಯಕ ಆಗಲು ಬಯಸುತ್ತೀರೋ? ಯಾರು ಅಧಿಕಾರಸ್ಥರು ಇರುತ್ತಾರೋ ಅವರಿಗೆ ಗುಡ್ ಮಾರ್ನಿಂಗ್ ಗುಡ್ ನೈಟ್ ಹೇಳಿಕೊಂಡು ಸುತ್ತಿದರೆ ಚೇಲಾ ಆಗುತ್ತೀರಿ. ಚೇಲಾ ಹೇಗೆ ಅಂದರೆ, ದನಕ್ಕೆ ಗೂಟ ಹಾಕಿದ ಹಾಗೆ. ಹತ್ತಾರು ಗೂಟಗಳಾದರೆ ನೆಗದು ಬಿದ್ದು ಹೋಗುತ್ತಾರೆ'' ಎಂದು ಸೂಚ್ಯವಾಗಿ ಮುಖಂಡರಿಗೆ ತಿವಿದರು.
''ಬಳ್ಳಾರಿ ಭಾಗದಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಹಾಗೂ ಶ್ರೀರಾಮುಲು ಇದ್ದಾರೆ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಜನಾರ್ದನ್ ರೆಡ್ಡಿ ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ಬಗ್ಗೆ ಗೊತ್ತಿಲ್ಲ, ಅದು ವರಿಷ್ಠರಿಗೆ ಬಿಟ್ಟ ವಿಚಾರ'' ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಫುಲ್ ಅಲರ್ಟ್: ಖಾನಾಪುರದಲ್ಲಿ ಕಾರ್ಯಕರ್ತರ ಸಭೆ, ಸಂಸದರ ಕಾರಿಗೆ ರೈತರ ಮುತ್ತಿಗೆ ಯತ್ನ