ಬೆಂಗಳೂರು: ಬಂಡವಾಳ ವೆಚ್ಚವು ರಾಜ್ಯದ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಆಸ್ತಿ ಸೃಜನೆಗಾಗಿ ಮಾಡುವ ವೆಚ್ಚವಾಗಿದೆ. ಸರ್ಕಾರ ತನ್ನ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸುವ ಮೊತ್ತದ ಆಧಾರದ ಮೇಲೆ ಸಾಮಾನ್ಯವಾಗಿ ಬಜೆಟ್ ಅಭಿವೃದ್ಧಿ ಪೂರಕವೋ, ಅಲ್ಲವೋ ಎಂಬುದನ್ನು ಪರಿಗಣಿಸಲಾಗುತ್ತದೆ. ಬಂಡವಾಳ ವೆಚ್ಚಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟರೆ, ಅದು ಅಭಿವೃದ್ಧಿ ಪರ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಬಂಡವಾಳ ವೆಚ್ಚದ ಮೇಲೆ ವ್ಯಯಿಸುವ ಖರ್ಚಿನ ಮೇಲೆ ರಾಜ್ಯದ ಅಭಿವೃದ್ಧಿಯ ಗತಿಯನ್ನು ಅಂದಾಜಿಸಲಾಗುತ್ತದೆ.
ಸಿದ್ದರಾಮಯ್ಯ ಸರ್ಕಾರ 2023-24 ಬಜೆಟ್‌ನಲ್ಲಿ ಮೀಸಲಿಟ್ಟ ಬಂಡವಾಳ ವೆಚ್ಚದ ಮೊತ್ತ 54,374 ಕೋಟಿ ರೂ. ಆಗಿದೆ. ಬರವು ರಾಜ್ಯದ ಬೊಕ್ಕಸದ ಮೇಲೆ ಇನ್ನಷ್ಟು ಹೊರೆ ಬೀಳಿಸಿದೆ. ಬಿಗು ಆರ್ಥಿಕ ಸ್ಥಿತಿಗತಿ ಮಧ್ಯೆ ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯ ಅಚಿನಲ್ಲಿದ್ದರೂ ಇನ್ನೂ ಬಂಡವಾಳ ವೆಚ್ಚದ ಮೇಲೆ ಸರ್ಕಾರ ಮಾಡುತ್ತಿರುವ ಖರ್ಚಿನಲ್ಲಿ ಪ್ರಗತಿ ಕಂಡಿಲ್ಲ. ಬಜೆಟ್‌ನಲ್ಲಿ ಅಂದಾಜಿಸಿದ ಬಂಡವಾಳ ವೆಚ್ಚವನ್ನು ಮಾಡುವಲ್ಲಿ ಹಿಂದೆ ಬಿದ್ದಿದೆ.
ಬಂಡವಾಳ ವೆಚ್ಚದಲ್ಲಿ 22%ರಷ್ಟು ಕುಂಠಿತ: ಆರ್ಥಿಕ ಇಲಾಖೆ ನೀಡಿರುವ ಮಾಹಿತಿಯಂತೆ, 2023-24 ಸಾಲಿನ ಜನವರಿ ತಿಂಗಳವರೆಗೆ ರಾಜ್ಯ ಸರ್ಕಾರ ಮಾಡಿದ ಬಂಡವಾಳ ವೆಚ್ಚ ಕೇವಲ 26,468 ಕೋಟಿ ರೂ. ಮಾತ್ರ. ಒಟ್ಟು ಬಂಡವಾಳ ವೆಚ್ಚದಲ್ಲಿ 10 ತಿಂಗಳಲ್ಲಿ 48.68% ಮಾತ್ರ ಪ್ರಗತಿ ಕಂಡಿದೆ. ಕಳೆದ ವರ್ಷ 2022-23 ಸಾಲಿನಲ್ಲಿ ಬಂಡವಾಳ ವೆಚ್ಚವಾಗಿ 46,954.53 ಕೋಟಿ ರೂ. ಅಂದಾಜಿಸಲಾಗಿತ್ತು. ಈ ಪೈಕಿ 10 ತಿಂಗಳ ಅವಧಿಯಲ್ಲಿ 33,991 ಕೋಟಿ ರೂ.ವರೆಗೆ ಬಂಡವಾಳ ವೆಚ್ಚ ಮಾಡಲಾಗಿತ್ತು. ಅಂದರೆ ಒಟ್ಟು 72.39% ಪ್ರಗತಿ ಸಾಧಿಸಲಾಗಿತ್ತು. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 10 ತಿಂಗಳಲ್ಲಿ 22%ರಷ್ಟು ಬಂಡವಾಳ ವೆಚ್ಚದಲ್ಲಿ ಕುಸಿತ ಕಂಡಿದೆ.
ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್ನಲ್ಲಿ ಒಟ್ಟು 141.42 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಮೇ ತಿಂಗಳಲ್ಲಿ ಒಟ್ಟು 1,772.85 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿತ್ತು. ಆದರೆ, ಜೂನ್ ತಿಂಗಳಲ್ಲಿ ಕೇವಲ 50.40 ಕೋಟಿ ರೂ. ಮಾತ್ರ ಬಂಡವಾಳ ವೆಚ್ಚ ಆಗಿತ್ತು. ಜುಲೈ ತಿಂಗಳಲ್ಲಿ 1,160.52 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿದೆ. ಅದೇ ಆಗಸ್ಟ್ ತಿಂಗಳಲ್ಲಿ 3,301.38 ಕೋಟಿ ರೂ. ಬಂಡವಾಳ ವೆಚ್ಚ ಕಂಡುಬಂದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಮಾಡಿದ ಬಂಡವಾಳ ವೆಚ್ಚ 3,866 ಕೋಟಿ ರೂ. ಹಾಗೂ ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರ 3,661 ಕೋಟಿ ರೂ. ಬಂಡವಾಳ ವೆಚ್ಚ ಮಾಡಿದೆ. ನವೆಂಬರ್ ತಿಂಗಳಲ್ಲಿ 6,360 ಕೋಟಿ ರೂ. ಬಂಡವಾಳ ವೆಚ್ಚದ ಮೇಲೆ ಖರ್ಚು ಮಾಡಿದೆ. ಡಿಸೆಂಬರ್ ತಿಂಗಳಲ್ಲಿ 2,349 ಕೋಟಿ ರೂ. ಬಂಡವಾಳ ವೆಚ್ಚ ಆಗಿದೆ. ಜನವರಿ ತಿಂಗಳಲ್ಲಿ 3,806 ಕೋಟಿ ರೂ. ಬಂಡವಾಳ ವೆಚ್ಚದ ಮೇಲೆ ಖರ್ಚು ಮಾಡಿದೆ. ಮಾಸಿಕವಾರು ಸರಾಸರಿ ಸುಮಾರು 3,200 ಕೋಟಿ ರೂ.ನಂತೆ ಬಂಡವಾಳ ವೆಚ್ಚ ಮಾಡಲಾಗುತ್ತಿದೆ.
ಇದನ್ನೂ ಓದಿ: ಏ.1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ: ಬಿಪಿಎಲ್ ಕಾರ್ಡ್ ಬೇಕಾ? ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ