ಶಿರಸಿ (ಉತ್ತರ ಕನ್ನಡ): ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯದ ಮಟ್ಟದಲ್ಲಿ ನಾಲ್ಕು ಸ್ಥಾನ ಪಡೆದುಕೊಂಡಿದೆ. ಮೂವರು ರಾಜ್ಯಕ್ಕೆ ದ್ವಿತೀಯ, ಓರ್ವರು ತೃತೀಯ ರ‍್ಯಾಂಕ್ ಪಡೆದಿದ್ದಾರೆ.
625ಕ್ಕೆ 624 ಅಂಕಗಳನ್ನು ಪಡೆದುಕೊಂಡು ಶಿರಸಿ ತಾಲೂಕಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ದರ್ಶನ ಭಟ್, ಗೋಳಿ ಪ್ರೌಢ ಶಾಲೆಯ ಚಿನ್ಮಯ ಹೆಗಡೆ ಹಾಗೂ ಭೈರುಂಬೆ ಶ್ರೀರಾಮ ಕೆ.ಎಂ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ಜಿಲ್ಲೆಯಲ್ಲಿ 7 ತಾಲೂಕುಗಳಿದ್ದರೂ ಸಹ ರ‍್ಯಾಂಕ್ ಪಡೆದ ಎಲ್ಲರೂ ಶಿರಸಿ ತಾಲೂಕಿನವರಾಗಿದ್ದಾರೆ.
ಇನ್ನು 623 ಅಂಕದೊಂದಿಗೆ ಗೋಳಿ ಪ್ರೌಢ ಶಾಲೆಯ ತೃಪ್ತಿ ಗೌಡ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಗಾಗಲೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮಾಚರಣೆ ನಡೆದಿದೆ. ಮಕ್ಕಳಿಗೆ ಸಿಹಿ ತಿನ್ನಿಸಿ ಪಾಲಕರು ಸಂಭ್ರಮಿಸಿದ್ದಾರೆ. ಉತ್ತಮ ರ‍್ಯಾಂಕ್ ಪಡೆದುಕೊಂಡಿದ್ದಕ್ಕಾಗಿ ಪ್ರೌಢಶಾಲೆಗಳ ಪ್ರಮುಖರೂ ಸಹ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: SSLC ರಿಸಲ್ಟ್: ಶೇ.73.40ರಷ್ಟು ಫಲಿತಾಂಶ, ಉಡುಪಿ ಫಸ್ಟ್, ಬಾಲಕಿಯರ ಮೇಲುಗೈ - SSLC Result
ದ್ವಿತೀಯ ರ‍್ಯಾಂಕ್ ಪಡೆದ ದರ್ಶನ ಭಟ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಬರುತ್ತದೆ ಎಂಬ ನಿರೀಕ್ಷೆ ಇತ್ತು. 625ಕ್ಕೆ 624 ಅಂಕ ಲಭಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ. ರಾಜ್ಯ ಮಟ್ಟದಲ್ಲಿ ಸ್ಥಾನ ಬೇಕು ಎಂಬುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ರ‍್ಯಾಂಕ್ ಬರಲು ಶಾಲೆಯ ಶಿಕ್ಷಕರು ಹಾಗೂ ಪಾಲಕರು ಮುಖ್ಯ ಕಾರಣ ಎಂದು ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿ; ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಫಸ್ಟ್ - SSLC RESULT