ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಭಾರಿ ಇಳಿಕೆಯಾಗಿದೆ. ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಪದ್ಧತಿ ಜಾರಿಗೊಳಿಸಿದ ನಂತರ ನಡೆದ ಮೊದಲನೇ ವಾರ್ಷಿಕ ಪರೀಕ್ಷೆಯಲ್ಲಿ ಕೇವಲ ಶೇ.50ರ ಗಡಿಯಲ್ಲಿದ್ದ ಫಲಿತಾಂಶ ಹೆಚ್ಚಿಸಲು ಕೃಪಾಂಕ ಪರಿಷ್ಕರಣೆ ಹಾದಿಯನ್ನು ಶಿಕ್ಷಣ ಇಲಾಖೆ ತುಳಿದಿದೆ. ಶೇ.20ರಷ್ಟು ಕೃಪಾಂಕ ನೀಡುವ ಮೂಲಕ ಫಲಿತಾಂಶವನ್ನು ಶೇ.74ಕ್ಕೆ ಕೊಂಡೊಯ್ಯಲಾಗಿದೆ.
ಶಿಕ್ಷಣ ನೀತಿಯಲ್ಲಿನ ಗೊಂದಲ ಸೇರಿದಂತೆ ಶೈಕ್ಷಣಿಕ ವ್ಯವಸ್ಥೆಯ ಕಾರಣವೋ ಅಥವಾ ವಿದ್ಯಾರ್ಥಿಗಳ ಆಸಕ್ತಿಯ ಕೊರತೆಯ ಕಾರಣವೋ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಕಾರಾತ್ಮಕವಾಗಿ ಬಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಫಲಿತಾಂಶವು ಶೇ.30ರಷ್ಟು ಕುಸಿತವಾಗಿ ಶೇ.50ರ ಗಡಿಗೆ ಬಂದು ನಿಲ್ಲುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಶೇ.20ರಷ್ಟು ಕೃಪಾಂಕ ನೀಡುವ ಮೂಲಕ ಫಲಿತಾಂಶವನ್ನು ಶೇ.74ರ ಗಡಿ ದಾಟಿಸಲಾಗಿದೆ.
ಇಷ್ಟಾದರೂ ಕಳೆದ ಬಾರಿಗೆ ಹೋಲಿಸಿದಲ್ಲಿ ಶೇ.10ರಷ್ಟು ಫಲಿತಾಂಶ ಕಡಿಮೆಯೇ ಇದೆ. ಅಂದರೆ ಶೇ.20-25ರಷ್ಟು ವಿದ್ಯಾರ್ಥಿಗಳಿಗೆ ಹಾಲಿ ಇದ್ದ ಶೇ.10ರ ಕೃಪಾಂಕದ ಜೊತೆಗೆ ಮತ್ತೆ ಶೇ.10ರಷ್ಟು ಹೆಚ್ಚುವರಿ ಕೃಪಾಂಕ ನೀಡುವ ಮೂಲಕ ಉತ್ತೀರ್ಣಗೊಳಿಸಲಾಗಿದೆ. ಅಲ್ಲದೇ, ಈ ನಿರ್ಧಾರವನ್ನು ಶಿಕ್ಷಣ ಇಲಾಖೆ ಸಮರ್ಥನೆ ಮಾಡಿಕೊಂಡಿದೆ.
ಮಕ್ಕಳ ಸ್ನೇಹಿಯಾಗಿ ಪರೀಕ್ಷೆಗೆ ಒತ್ತು: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿದ ಮಾಧ್ಯಮಗೋಷ್ಟಿಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಮಾತನಾಡಿ, ಈ ಹಿಂದೆ ಇದ್ದ ಪದ್ಧತಿಯಂತೆ ಪರೀಕ್ಷೆ ನಡೆಸಿದ್ದರೆ, ಈ ಬಾರಿ ಶೇ.30ರಷ್ಟು ಫಲಿತಾಂಶ ಕಡಿಮೆಯಾಗುತ್ತಿತ್ತು. ರೀ ನಾರ್ಮಲೈಸೇಷನ್ ಮಾಡಿದ ನಂತರ ಫಲಿತಾಂಶ ಶೇ.74ರಷ್ಟು ಬಂದಿದೆ. ಮಕ್ಕಳ ಅನುತ್ತೀರ್ಣ ನಮ್ಮ ಉದ್ದೇಶವಲ್ಲ, ಮಕ್ಕಳ ಸ್ನೇಹಿ ಪರೀಕ್ಷಾ ಪದ್ಧತಿ ಅಳವಡಿಕೆ ಮಾಡುತ್ತಿದ್ದೇವೆ. ಬೇರೆ-ಬೇರೆ ರಿಫಾರ್ಮ್ಸ್ ಅನ್ನು ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ಮೂರು ಪರೀಕ್ಷೆ ಮಾಡುತ್ತಿದ್ದೇವೆ. ಯಾಕಂದರೆ, ಮಕ್ಕಳಿಗೆ ಬೋರ್ಡ್ ಎಕ್ಸಾಂ ಸವಾಲಾಗಬಾರದು. ಇತರ ಪರೀಕ್ಷೆ ರೀತಿ ಆಗಬೇಕು. ಪಿಯುನಲ್ಲಿ ಇಂಟರ್ನಲ್ ಅಸೆಸ್ಮೆಂಟ್, ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ ಪ್ರಾರಂಭ ಮಾಡಿದ್ದೇವೆ. ಮಕ್ಕಳ ಸ್ನೇಹಿಯಾಗಿ ಪರೀಕ್ಷೆ ನಡೆಯಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.
ವೆಬ್ ಕ್ಯಾಸ್ಟಿಂಗ್ ಮಾಡಿದ್ದು, ಮಕ್ಕಳ ಸ್ನೇಹಿ ವಿಧಾನದ ಭಾಗವಾಗಿದೆ. ಇದು ಪರೀಕ್ಷಾ ಅಕ್ರಮ ಸುಧಾರಣೆಗೆ ದೊಡ್ಡ ಹೆಜ್ಜೆಯಾಗಲಿದೆ. ಮೊದಲ ಬಾರಿ ಸರ್ಕಾರದಿಂದ ಈ ರೀತಿ ಕ್ರಮ ಆಗಿದೆ. ರೀ ನಾರ್ಮಲೈಸೇಷನ್ ಮಾಡಿ ಮಕ್ಕಳ ಸ್ನೇಹಿ ಪರೀಕ್ಷಾ ಪದ್ಧತಿ ಮಾಡುವ ಪ್ರಯತ್ನವಿದೆ. ಈಗ ಫಲಿತಾಂಶ ಕಡಿಮೆಯಾದರೂ ಯಾರೂ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನೂ ಎರಡು ಪರೀಕ್ಷೆ ಇದೆ. ಪರೀಕ್ಷೆ 2ಕ್ಕೆ ಇನ್ನೂ ಒಂದು ತಿಂಗಳು ಸಮಯ ಇದೆ. ಮುಂದಿನ ವಾರದಿಂದಲೇ ಎಲ್ಲ ಶಾಲೆಗಳಲ್ಲಿ ಪರೀಕ್ಷಾ ಸಿದ್ಧತೆಗಾಗಿ ವಿಶೇಷ ಕಾರ್ಯಕ್ರಮ ಮಾಡಲಿದ್ದೇವೆ. ಕಡಿಮೆ ಅಂಕ ಬಂದವರ ಫಲಿತಾಂಶ ಉತ್ತಮಗೊಳಿಸಲು ಅವಕಾಶ ಸಿಗಲಿದೆ. ಇನ್ ಕಂಪ್ಲೀಟ್ ಆದವರ ಉತ್ತೀರ್ಣಕ್ಕೂ ಅವಕಾಶ ಇದೆ. ಹಾಗಾಗಿ ಯಾರೂ ಚಿಂತೆ ಮಾಡಬೇಡಿ, ಒತ್ತಡಕ್ಕೆ ಸಿಲುಕಬೇಡಿ, ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಪರೀಕ್ಷೆ 2 ಮತ್ತು 3ಕ್ಕೆ ಸಿದ್ಧರಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶೇ.100ರಷ್ಟು ವೆಬ್ ಕಾಸ್ಟಿಂಗ್: ಕಳೆದ ಬಾರಿ ಶೇ.84ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷದ ಗುರಿಯೂ ನಮ್ಮದು ಅದೇ ಆಗಿದೆ. ಪರೀಕ್ಷೆ 1ರಲ್ಲಿ ಕಡಿಮೆ ಫಲಿತಾಂಶ ಬಂದಿದ್ದರೂ, ಎರಡನೇ ಹಾಗು ಮೂರನೇ ಪರೀಕ್ಷೆಗಳಿವೆ. ಈ ಮೂರು ಪರೀಕ್ಷೆಗಳು ಸೇರಿ ಕಳೆದ ಬಾರಿಯ ಮಟ್ಟ ತಲುಪಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಈ ಬಾರಿ ನಡೆಸಿದ ವೆಬ್ ಕ್ಯಾಸ್ಟಿಂಗ್ ಪರೀಕ್ಷಾ ಫಲಿತಾಂಶದಲ್ಲಿ ಶೇ.10ರಷ್ಟು ಕಡಿಮೆಗೆ ಕಾರಣವಾಗಿದೆ. ಈ ಬಾರಿ ಪ್ರಾಯೋಗಿಕವಾಗಿ ವೆಬ್ ಕ್ಯಾಸ್ಟಿಂಗ್ ಮಾಡಿದ್ದು, ಪರೀಕ್ಷೆ 2, 3ಕ್ಕೆ ಶೇ.100ರಷ್ಟು ವೆಬ್ ಕಾಸ್ಟಿಂಗ್ ಮಾಡಲಿದ್ದೇವೆ. ವೆಬ್ ಕ್ಯಾಸ್ಟಿಂಗ್ನಿಂದ ಫಲಿತಾಂಶ ಕಡಿಮೆಯಾಗಿರಬಹುದು. ಆದರೆ ನಮ್ಮ ಪರೀಕ್ಷಾ ನೀತಿಯನ್ನು ಎಲ್ಲ ಮಕ್ಕಳು, ಪೋಷಕರು ಸ್ವಾಗತ ಮಾಡಿದ್ದಾರೆ. ಇದು ಸರ್ಕಾರದ ತೀರ್ಮಾನವಾಗಿದ್ದು ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಇದನ್ನು ಮಕ್ಕಳ ಭವಿಷ್ಯದ ದೃಷ್ಟಿಯಿಂದಲೇ ಜಾರಿಗೆ ತರಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಪರೀಕ್ಷೆ 2ಕ್ಕೆ ನಿಗದಿತ ವೇಳಾಪಟ್ಟಿಯ ಸಮಯವನ್ನು ಒಂದು ವಾರ ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆ 1ರ ಇನ್ ಕಂಪ್ಲೀಟ್ ಹಾಗೂ ಅಂಕಗಳ ಉತ್ತಮೀಕರಣಕ್ಕೆ ಇಚ್ಛಿಸುವ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಮಾಡುವ ಕಾರಣಕ್ಕೆ ಎರಡನೇ ಪರೀಕ್ಷೆಯನ್ನು ಒಂದು ವಾರ ವಿಳಂಬ ಮಾಡಲಾಗುತ್ತಿದೆ. ಮೊದಲ ಪರೀಕ್ಷೆಯಲ್ಲಿ ಯಾರನ್ನೂ ಅನುತ್ತೀರ್ಣ ಎಂದು ಪ್ರಕಟಿಸುತ್ತಿಲ್ಲ. ನಾಟ್ ಕಂಪ್ಲೀಟೆಡ್ ಎಂದೇ ಅಂಕಪಟ್ಟಿಯಲ್ಲಿ ಬರಲಿದೆ. ಎರಡನೇ, ಮೂರನೇ ಪರೀಕ್ಷೆಯಲ್ಲಿ ಕ್ಲಿಯರ್ ಮಾಡಿಕೊಳ್ಳದೇ ಇದ್ದಲ್ಲಿ ಮಾತ್ರ ಅಂಕಪಟ್ಟಿಯಲ್ಲಿ ಫೇಲ್ ಅಂತಾ ಬರಲಿದೆ. ಈ ಬಾರಿಯೂ ಶೂನ್ಯ ಫಲಿತಾಂಶದ 78 ಶಾಲೆಗಳಿವೆ. ನಿಯಮದ ಪ್ರಕಾರ, ಈ ಶಾಲೆಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು