ದಾವಣಗೆರೆ: ನಿಯಂತ್ರಣ ಕಳೆದುಕೊಂಡು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿರುವ ಘಟನೆ ದಾವಣಗೆರೆಯ ರಿಂಗ್ ರಸ್ತೆಯ ಕ್ಲಾಕ್ ಟವರ್ ಬಳಿ ಇಂದು ನಡೆದಿದೆ. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಅಪಘಾತಕ್ಕೆ ಅತೀ ವೇಗ ಪ್ರಮುಖ ಕಾರಣ ಎಂಬುದು ಪ್ರತ್ಯಕ್ಷದರ್ಶಿಗಳ ವಾದವಾಗಿದೆ. ಕಾರು ದಾವಣಗೆರೆ ನಗರದ ಎಸ್ಎಸ್ ಲೇಔಟ್ನ ಶಾರದಾಂಬ ದೇವಾಲಯದ ಕಡೆಯಿಂದ ಅತೀ ವೇಗವಾಗಿ ಆಗಮಿಸಿ ನಿಜಲಿಂಗಪ್ಪ ಲೇಔಟ್ ಬಳಿಯ ರಿಂಗ್ ರಸ್ತೆ ಕ್ಲಾಕ್ ಟವರ್ನ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದೇ ಡಿವೈಡರ್ ಬಳಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಅಪ್ಪಳಿಸಿ ಅದೇ ರಸ್ತೆ ಬದಿಯಲ್ಲಿದ್ದ ಸೆಕೆಂಡ್ಸ್ ಕಾರು ಶೋರೂಂಗೆ ನುಗ್ಗಿದೆ. ಇದರ ಪರಿಣಾಮ ಶೋರೂಂನಲ್ಲಿದ್ದ ಎರಡು ಕಾರುಗಳು ಜಖಂ ಆಗಿವೆ.
ಇನ್ನು ದ್ವಿಚಕ್ರ ವಾಹನ ಸವಾರನಿಗೂ ಗಾಯಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೇ ಕಾರಿನಲ್ಲಿದ್ದ ಮಣಿ ಸರ್ಕಾರ್ ಅವರ ಎರಡು ಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಆಟೋ ಮೂಲಕ ಸಾಗಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರನ್ನು ತೆರವುಗೊಳಿಸಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಅಪಘಾತದ ಭೀಕರತೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಕಂಟೈನರ್ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು: ನಾಲ್ವರು ಸಾವು, ನಾಲ್ವರ ಸ್ಥಿತಿ ಗಂಭೀರ - ROAD ACCIDENT