ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿವುದರಿಂದ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಅಧಿಕಾರಿಗಳು ನದಿಯ ಮೂಲಕ ಹೊರಕ್ಕೆ ಹರಿಸುತ್ತಿದ್ದಾರೆ.
ಪರಿಣಾಮ ನದಿಯಲ್ಲಿ 50 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳಲ್ಲಿ ಒಂದಾದ ಆನೆಗೊಂದಿ ಸಮೀಪ ಇರುವ ವಿಜಯನಗರದ ಸಾಮ್ರಾಟ ಶ್ರೀಕೃಷ್ಣದೇವರಾಯನ ಸಮಾಧಿಯ ಸುತ್ತಲೂ ತುಂಗಭದ್ರಾ ನದಿಯ ನೀರು ಪ್ರವಹಿಸುವ ಮೂಲಕ ದಿಗ್ಬಂಧನ ಹಾಕಿದಂತಾಗಿದೆ.
ಸಹಜವಾಗಿ ನದಿಯಲ್ಲಿ ಕಳೆದ ಎರಡು ದಿನಗಳಿಂದ ಹಂತ - ಹಂತವಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಗುರುವಾರ 30 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, ಶ್ರೀ ಕೃಷ್ಣದೇವರಾಯನ ಸಮಾಧಿ ಎಂದು ಹೇಳಲಾಗುತ್ತಿರುವ 64 ಕಾಲಿನ ಮಂಟಪದ ಸುತ್ತಲೂ ನೀರು ಪ್ರವಹಿಸುತ್ತಿದೆ.
ಶ್ರೀಕೃಷ್ಣದೇವರಾಯ ಇಚ್ಛೆಯ ಮೆರೆಗೆ ನಿಧನ ಹೊಂದಿದ ಬಳಿಕ ಆನೆಗೊಂದಿ ಗ್ರಾಮದ ಹೊರಭಾಗದಲ್ಲಿರುವ ತುಂಗಭದ್ರಾ ತಟದಲ್ಲಿ ಸಮಾಧಿ ಕಟ್ಟಲಾಗಿದೆ ಎಂಬ ಇತಿಹಾಸದಿಂದ ತಿಳಿಯುತ್ತದೆ. ಕೃಷ್ಣದೇವರಾಯ ಪ್ರಾಚೀನ 64 ಕಲೆಗಳಲ್ಲಿ ಪ್ರವೀಣನಾಗಿದ್ದರಿಂದ ಆತನ ಸಮಾಧಿಯ ಮೇಲೆ 64 ಕಂಬಗಳ ಮಂಟಪ ಕಟ್ಟಿಸಲಾಗಿದೆ ಎಂಬ ಮಾಹಿತಿ ಇದೆ.
ನದಿಗೆ 70ರಿಂದ 80 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಕೃಷ್ಣದೇವರಾಯ ಸಮಾಧಿ ಸಂಪೂರ್ಣ ಮುಳುಗಡೆಯಾಗುತ್ತದೆ. ಅಲ್ಲದೇ ಸಮೀಪದಲ್ಲಿರುವ ಮಾಧ್ವಮತ ಪ್ರಚಾರಕ ಯತಿಗಳ ಐಕ್ಯಸ್ಥಳ ನವವೃಂದಾವನಕ್ಕೆ ಹೋಗುವ ಮಾರ್ಗ ಸ್ಥಗಿತವಾಗಲಿದೆ.
ರೆಡ್ ಅಲರ್ಟ್ ಮೆಸೇಜ್: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು, ನದಿಪಾತ್ರದ ಜನರಿಗೆ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಇರುವಂತೆ ರೆಡ್ ಅಲರ್ಟ್ ಜಾರಿ ಮಾಡಿದ್ದಾರೆ.
ತುಂಗಾ ಮತ್ತು ವರದಾ ನದಿಯ ಪ್ರವಾಹದ ನೀರು ತುಂಗಭದ್ರಾ ಜಲಾಶಯಕ್ಕೆ ಬರುತ್ತಿರುವ ಹಿನ್ನೆಲೆ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. ಸದ್ಯಕ್ಕೆ 27 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಈ ಪ್ರಮಾಣ 50 ಸಾವಿರ ಕ್ಯೂಸೆಕ್ಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.