ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದವರಿಗೆ ನಗರದಲ್ಲಿ ವಿಶೇಷ ವ್ಯವಸ್ಥೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ ತಯಾರಾಗಿದೆ. ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯನ್ನು ವಾಸವಿ ದೇಗುಲದ ಅಳತೆಗೆ ತಕ್ಕಂತೆ ರೂಪಿಸಲಾಗಿದೆ.
ಇದು 24 ಅಡಿ ಉದ್ದ, 18 ಅಡಿ ಅಗಲದ ರಾಮಮಂದಿರವಾಗಿದೆ. ಗೋಪುರ 16 ಅಡಿ ನಿರ್ಮಾಣ ಮಾಡಲಾಗಿದೆ. ಈ ಪ್ರತಿಕೃತಿಯನ್ನು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ನಾಳೆ ಉದ್ಘಾಟಿಸಲಿದ್ದಾರೆ. ರಾಮನಿಗೆ ಅಭಿಷೇಕ, ಪೂಜೆ, ಭಜನೆಗಳು ನಡೆಯಲಿವೆ. ಇಲ್ಲಿ ಜ.30ರ ವರೆಗೆ ಬೆಳಗ್ಗಿನಿಂದ ರಾತ್ರಿವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
![special-programs-will-be-held-tomorrow-in-bengaluru](https://etvbharatimages.akamaized.net/etvbharat/prod-images/21-01-2024/kn-bng-05-rama-mandir-programmes-city-7210969_21012024220010_2101f_1705854610_741.jpg)
ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವಿಗ್ರಹಗಳನ್ನು ಭಾನುವಾರ ಅರ್ಚಕರು ಅಲಂಕಾರ ಮಾಡಿದ್ದು, ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ.
ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ನೇರ ಪ್ರಸಾರ: ಸೋಮವಾರ ಮಧ್ಯಾಹ್ನ 12:20ಕ್ಕೆ ಅಯೋಧ್ಯೆಯ ರಾಮಮಂದಿರದಿಂದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ನೇರ ಪ್ರಸಾರವನ್ನು ರಾಜಾಜಿನಗರದ ಬ್ರಿಗೇಡ್ ಗೇಟ್‌ವೇನಲ್ಲಿನ ಓರಿಯನ್ ಮಾಲ್ ಆಯೋಜಿಸಲಿದೆ. ಇದೇ ಮಾದರಿಯಲ್ಲಿ ಹಲವು ಮಾಲ್, ದೇವಸ್ಥಾನಗಳು, ಪೂಜಾ ಭಜನಾ ಮಂದಿರ, ಅಪಾರ್ಟ್‌ಮೆಂಟ್ ಮತ್ತು ವಿಲ್ಲಾ ಕಾಂಪ್ಲೆಕ್ಸ್ ಗಳಲ್ಲಿ ದೊಡ್ದ ಪರದೆ ಅಳವಡಿಸಿ ನೇರ ಪ್ರಸಾರವನ್ನು ಮಾಡಲಾಗುತ್ತಿದೆ.
![special-programs-will-be-held-tomorrow-in-bengaluru](https://etvbharatimages.akamaized.net/etvbharat/prod-images/21-01-2024/kn-bng-05-rama-mandir-programmes-city-7210969_21012024220010_2101f_1705854610_214.jpg)
ಭಾನುವಾರ ನಡೆದ ಕಾರ್ಯಕ್ರಮಗಳು: ನಗರದ ಜಯನಗರದ ಅಶೋಕ ಪಿಲ್ಲರ್ ಬಳಿ ಅಗ್ರಸೇನ ಭವನದಲ್ಲಿ ಭಾನುವಾರ ಮಾರವಾಡಿ ಯುವಕ ಮಂಚ್ ವತಿಯಿಂದ ಶ್ರೀರಾಮನ ಸುಂದರಕಾಂಡ ಪ್ರವಚನವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ, ಹನುಮ ಸಹಿತ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು. ನೂರಾರು ಜನರು ಪಾಲ್ಗೊಂಡಿದ್ದರು. ಎಸ್‌ಬಿಎಂ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಿರುವ ರಾಮನ ಪ್ರತಿಮೆಯೊಂದಿಗೆ ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
![special-programs-will-be-held-tomorrow-in-bengaluru](https://etvbharatimages.akamaized.net/etvbharat/prod-images/21-01-2024/kn-bng-05-rama-mandir-programmes-city-7210969_21012024220010_2101f_1705854610_1066.jpg)
ಬೆಂಗಳೂರಿನ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಗಾಣಿಗರಪೇಟೆ ರಾಮ ಭಕ್ತ ಮಂಡಳಿಯ ಆಯೋಜಿಸಿದ್ದ ರಾಮ ವಿಗ್ರಹ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ವೇಷಧಾರಿಗಳು ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿ ಗಾಣಿಗರಪೇಟೆ ರಾಮ ಭಕ್ತ ಮಂಡಳಿಯ ಆಯೋಜಿಸಿದ್ದ ರಾಮ ವಿಗ್ರಹ ಮೆರವಣಿಗೆಯಲ್ಲಿ ಸಂಘದ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಹೊಂಬೇಗೌಡ ನಗರದಲ್ಲಿ ಅದ್ಧೂರಿ ಶ್ರೀರಾಮ ರಥೋತ್ಸವ ಸಮಾರಂಭ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಾಳೆ ಲೋಕರ್ಪಣೆ ಶುಭಾ ಸಮಾರಂಭಕ್ಕೆ ಹೊಂಬೇಗೌಡನಗರ ವಾರ್ಡ್ ನಲ್ಲಿ ಅದ್ಧೂರಿ ಶ್ರೀರಾಮ ರಥೋತ್ಸವ ಕಾರ್ಯಕ್ರಮ ಜರುಗಿತು. ಪ್ರಭು ಶ್ರೀರಾಮನ ಚಿತ್ರವನ್ನು ಮೆರವಣಿಗೆ ಮೂಲಕ ಹೊಂಬೇಗೌಡ ನಗರದ ರಾಜಬೀದಿಯಲ್ಲಿ ಜನರು ಮೆರವಣಿಗೆ ಮಾಡಿದರು.
ಸ್ಲಂ ಸಂಸ್ಥೆಯ ಸಂಸ್ಥಾಪಕಿ, ದಕ್ಷಿಣ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಟ್ರಸ್ಟಿ ಅಂಬರೀಶ್(ಅಮರೇಶ್) ಉದ್ಯಮಿ ಚಂದ್ರಶೇಖರ್, ವಿಲ್ಸನ್ ಗಾರ್ಡನ್ ವಾರ್ಡ್ ಅಧ್ಯಕ್ಷ ಅಜಿತ್ ಮತ್ತು ಬಜರಂಗದಳ, ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ಬಿಜೆಪಿ ಮುಖಂಡರು ಕಾರ್ಯಕರ್ತರು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ನಾಳೆ ರಜೆ ಘೋಷಣೆ ಮಾಡುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ