ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆರು ತಿಂಗಳೊಳಗೆ ಶಿಶುವೊಂದು ಜನಿಸಿದ್ದು, ಸ್ಪರ್ಶ ಆಸ್ಪತ್ರೆಯ ಡಾ. ಮಾರ್ತಂಡಪ್ಪ ಹಾಗೂ ಡಾ. ಸೀಮಾ ನೇತೃತ್ವದ ವೈದ್ಯರ ತಂಡ, ನಿರಂತರ ಪ್ರಯತ್ನದಿಂದ ನವಜಾತ ಶಿಶುವನ್ನು ಪೋಷಕರ ಮಡಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ 40 ವಾರಗಳಲ್ಲಿ ಮಗು ಜನನವಾಗಬೇಕು. ಆದ್ರೆ ನಗರದ ಸಾಗರ ಗಣಾಚಾರಿ ಅವರ ಪತ್ನಿ ಸಂಜನಾ ಮಗು ಹುಟ್ಟುವ ಮುನ್ನ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದರು. ಗರ್ಭ ಚೀಲ ತೆರೆದುಕೊಂಡಿತ್ತು. ನೀರು ಸಹ ಕಡಿಮೆ ಆಗಿತ್ತು. ತಾಯಿ ಗರ್ಭದಲ್ಲಿ ಮಗು ಉಳಿದುಕೊಳ್ಳುವ ಸಾಧ್ಯತೆ ಇರಲಿಲ್ಲ. ಈ ವಿಷಯ ತಿಳಿದ ಸ್ಪರ್ಶ ಆಸ್ಪತ್ರೆಗೆ ವೈದ್ಯರ ತಂಡ ಮೊದಲು ನಾಲ್ಕು ದಿನಗಳ ಕಾಲ ಗರ್ಭದಲ್ಲಿ ಮಗುವಿನ ಆರೈಕೆ ಮಾಡಿದ ನಂತರ ಹೆರಿಗೆ ಮಾಡಿಸಿದೆ. ಆರು ತಿಂಗಳು ಪೂರೈಸಿ ಹೆರಿಗೆಯಾದ ಮಗುವಿಗೆ ತಾಯಿ ಗರ್ಭದಲ್ಲಿ ಸಿಗಬೇಕಾದ ಎಲ್ಲ ಆರೈಕೆಯನ್ನು ಇದೀಗ ತುರ್ತು ನಿಗಾ ಘಟಕ(ಐಸಿಯು)ದಲ್ಲಿ ಕೊಡಲಾಗಿದೆ.
ಡಾ. ಮಾರ್ತಂಡಪ್ಪ ಹಾಗೂ ಡಾ. ಸೀಮಾ ಭೈರಿ ನೇತೃತ್ವದ ವೈದ್ಯರ ತಂಡ ಎರಡು ತಿಂಗಳ ಕಾಲ ಎನ್ಐಸಿಯುನಲ್ಲಿ ಆರೈಕೆ ಮಾಡಿ ಮಗು ಹಾಲು ಕುಡಿಯುವ ಹಂತಕ್ಕೆ ಬಂದ ಮೇಲೆ ಪೋಷಕರ ಮಡಲಿಗೆ ಒಪ್ಪಿಸಿದ್ದಾರೆ.
ಈ ಕುರಿತಂತೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ನವಜಾತ ಶಿಶು ತಜ್ಞ ವೈದ್ಯ ಡಾ. ಮಾರ್ತಾಂಡಪ್ಪ, ''ಇದೊಂದು ಕ್ಲಿಷ್ಟಕರವಾದ ಪ್ರಕರಣ. ಆರು ತಿಂಗಳಿಗೆ ಆರು ದಿನ ಕಡಿಮೆ ಇರುವಾಗಲೇ ಮಗು ಜನನವಾಗಿದೆ. ಹುಟ್ಟಿದಾಗಲೇ ಶಿಶು ಕೇವಲ 840 ಗ್ರಾಂ ತೂಕ ಹೊಂದಿತ್ತು. ಹೀಗಾಗಿ ನಿರಂತರವಾಗಿ 20 ದಿನ ಐಸಿಯುನಲ್ಲಿ ಇಡಲಾಗಿತ್ತು. ಅದಾದ ನಂತರ 30 ದಿನಗಳ ಹೋರಾಟದ ಬಳಿಕ ಬಂದಿರುವ ಮಗುವಾಗಿದೆ. ಈ ಮಗುವನ್ನು ನೀರಿನ ಮೇಲಿನ ಗುಳ್ಳೆಯಂತೆ ನೋಡಿಕೊಳ್ಳಬೇಕಿತ್ತು. ಗುಳ್ಳೆ ಒಡೆಯಲು ಬಿಡದಂತೆ ನಮ್ಮ ನರ್ಸಿಂಗ್ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಸಾಮಾನ್ಯವಾಗಿ ಮಗು 40 ವಾರಗಳ ನಂತರ ಜನಿಸುತ್ತದೆ. ಆದ್ರೆ ಇದನ್ನು ಎಲ್ಲಾ ವೈದ್ಯರು ಮಾಡುತ್ತಾರೆ. 28 ವಾರಗಳು ಅಂದ್ರೆ 7 ರಿಂದ ಏಳೂವರೆ ತಿಂಗಳ ಪೂರ್ವದಲ್ಲಿ ಮಕ್ಕಳು ಹುಟ್ಟಿದ್ದನ್ನು ನಾವು ಹೆಚ್ಚು ವೈದ್ಯಕೀಯ ಉಪಚಾರ ಮಾಡಿದ್ದೇವೆ. ಏಳು ತಿಂಗಳ ಆಸುಪಾಸಿನಲ್ಲಿ ಜನಿಸಿದ ಶೇ.80-85ರಷ್ಟು ಮಕ್ಕಳು ಹುಬ್ಬಳ್ಳಿಯಲ್ಲಿ ಬದುಕುಳಿದಿವೆ. ಆದ್ರೆ ಇದೊಂದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ಬಗ್ಗೆ ಪೋಷಕರಿಗೆ ಇದು ಅಸಾಧ್ಯ ಅಂತ ಮನವರಿಕೆ ಮಾಡಿದಾಗಲೂ ಅವರ ಒತ್ತಾಯಕ್ಕೆ ಮಣಿದು ಮಾಡಲಾಗಿದೆ. ಆದ್ರೆ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ'' ಎಂದು ಹೇಳಿದರು.
ಅವಧಿಪೂರ್ವ ಜನನಕ್ಕೆ ಕಾರಣ: ''ಅವಧಿ ಪೂರ್ವ ಜನನ ಇತ್ತೀಚಿಗೆ ಹೆಚ್ಚಾಗಿದೆ. ಅದರಲ್ಲೂ ಶೇ.30ರಷ್ಟು ಪ್ರಮಾಣವಿದೆ. ಈ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಕೃತಕ (ಐವಿಎಫ್) ಗರ್ಭಧಾರಣೆ. ಐವಿಎಫ್ನಿಂದ ಅವಳಿ, ತ್ರಿವಳಿ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಿದೆ. ಆಹಾರ ವಿಧಾನ, ಮಾಲಿನ್ಯ, ಬಿಪಿ, ಶುಗರ್ ಸಮಸ್ಯೆಗಳು ಹೆಚ್ಚಾಗುತ್ತವೆ. ತಾಯಂದಿರ ವಯಸ್ಸು ಹೆಚ್ಚಾಗುತ್ತಿರುವುದು ಶಿಶುಗಳ ಅವಧಿ ಪೂರ್ವ ಜನನಕ್ಕೆ ಪ್ರಮುಖ ಕಾರಣ'' ಎಂದು ವೈದ್ಯರು ವಿವರಿಸಿದರು.
ಪ್ರಸೂತಿ ತಜ್ಞೆ ಡಾ. ಸೀಮಾ ಭೈರಿ ಪ್ರತಿಕ್ರಿಯಿಸಿ, ''30 ದಿನಗಳ ಕಾಲ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಆರೈಕೆ ಮಾಡಲಾಗಿದೆ. ಇದೊಂದು ಅಪರೂಪದ ಪ್ರಕರಣ. ಆರು ತಿಂಗಳೊಳಗಾಗಿ ಮಗು ಹಾಗೂ ಮಗಿವಿನ ಎಲ್ಲ ಅಂಗಗಳ ಬೆಳವಣಿಗೆಯೂ ಆಗಿರಲ್ಲ. ತಾಯಿ ಗರ್ಭದಲ್ಲಿ ಆಗಬೇಕಾದ ಬೆಳವಣಿಗೆಯನ್ನು ಎನ್ಐಸಿಯುನಲ್ಲಿ ಮಾಡಿದ್ದೇವೆ. ಎಲ್ಲ ಸಂಕಷ್ಟಗಳಿಂದ ಮಗು ಪಾರಾಗಿದೆ. ಮುಂದಿನ ದಿನಗಳಲ್ಲಿ ಮಗು ಸಹಜವಾಗಿ ಬೆಳವಣಿಗೆಯಾಗುತ್ತದೆ. ನಾಲ್ಕು ವಾರಗಳ ಕಾಲ ಉಸಿರಾಟ ಯಂತ್ರದ ಮೂಲಕ ಮಗುವಿನ ಆರೈಕೆ ಮಾಡಿ, ಮೆದುಳು, ಶ್ವಾಸಕೋಶ ಇತ್ಯಾದಿ ಅಂಗಗಳ ಬೆಳವಣಿಗೆಗೆ ಚಿಕಿತ್ಸೆ ನೀಡಲಾಗಿದೆ. ಮಗು ಹಾಲು ಕುಡಿಯೋದನ್ನು ಪ್ರಾರಂಭಿಸಿದ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ಮಗುವಿನ ತೂಕ 1.6 ಕೆಜಿಗೆ ಏರಿಕೆಯಾಗಿದೆ. ಇದು ಉತ್ತರ ಕರ್ನಾಟಕದಲ್ಲಿಯೇ ಅಪರೂಪದ ಪ್ರಯತ್ನವಾಗಿದೆ. ಮಗುವನ್ನು ಬದುಕಿಸೋಕೆ ಆಗಲ್ಲ ಅಂತ ಬೇರೆ ಆಸ್ಪತ್ರೆ ವೈದ್ಯರು ಕೈಚೆಲ್ಲಿದ್ದರು. ನಾವು ಚಾಲೆಂಜ್ ಆಗಿ ತೆಗೆದುಕೊಂಡು ಮಗುವನ್ನು ಬದುಕುಳಿಸಿ ಕೊನೆಗೂ ತಾಯಿ ಮಡಿಲಿಗೆ ಸೇರಿಸಿದ್ದೇವೆ. ಇದು ಉತ್ತರ ಕರ್ನಾಟಕದಲ್ಲಿ ಪ್ರಥಮ'' ಎಂದು ಸಂತಸ ವ್ಯಕ್ತಪಡಿಸಿದರು.
ಸ್ಪರ್ಶ ವೈದ್ಯರ ತಂಡದ ಕಾರ್ಯಕ್ಕೆ ಮಗುವಿನ ತಂದೆ ಸಾಗರ ಗಣಾಚಾರಿ ಕೃತಜ್ಞತೆ ಸಲ್ಲಿಸಿದ್ದಾರೆ. ''ಎಲ್ಲ ಆಸ್ಪತ್ರೆಯಲ್ಲೂ ಮಗು ಉಳಿಯುವುದು ಅಸಾಧ್ಯ ಅಂತ ಕಳುಹಿಸಿದ್ದರು. ಆದರೆ, ಸ್ಪರ್ಶ ಆಸ್ಪತ್ರೆಯ ವೈದ್ಯರು ನನ್ನ ಮಗುವಿನ ಜೀವ ಉಳಿಸಿದ್ದಾರೆ. ಹಾಗಾಗಿ ನಾನು ಅವರಿಗೆ ನಮ್ಮ ಕುಟುಂಬದ ವತಿಯಿಂದ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.
ಇದನ್ನೂ ಓದಿ: ಕಲಬುರಗಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ಅಪಹರಣ ಪ್ರಕರಣ: ತಾಯಿ ಮಡಿಲು ಸೇರಿದ ಕಂದಮ್ಮ