ಬೆಳಗಾವಿ : ಒಂದೇ ತಿಂಗಳಲ್ಲಿ ಮೂರು ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿ ಮೂವರು ಒಂದೇ ತಿಂಗಳಲ್ಲಿ 1.53 ಕೋಟಿ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೈಬರ್ ವಂಚಕರಿಂದ ಇಬ್ಬರು ಇಂಜಿನಿಯರ್, ಓರ್ವ ಉದ್ಯಮಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಒಂದೇ ತಿಂಗಳಲ್ಲಿ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್, ಚಿಕ್ಕೋಡಿಯ ನಿವಾಸಿಗಳು ಹಣ ಕಳೆದುಕೊಂಡವರು ಎಂದು ಮಾಹಿತಿ ನೀಡಿದರು.
ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮದ ನಿವಾಸಿ ಹಾಗೂ ಇಂಜಿನಿಯರ್ ಶಿವರಾಜ್‌ಗೆ 75.20 ಲಕ್ಷ ಪಂಗನಾಮ ಬಿದ್ದಿದೆ. ಫೇಸ್ಬುಕ್‌ನಲ್ಲಿ ಬಂದ ಜಾಹೀರಾತು ರೀಲ್ಸ್ ನೋಡಿ ಶಿವರಾಜ್ ಮೋಸ ಹೋಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿದ್ರೆ ಒಂದೇ ದಿನದಲ್ಲಿ ಶೇ. 10 ಪಟ್ಟು ಲಾಭವಾಗುತ್ತೆ ಎಂದು ವಂಚಕರು ಅವರನ್ನು ಪುಸಲಾಯಿಸಿದ್ದಾರೆ.
ಬೆನ್ ಕ್ಯಾಪಿಟಲ್, ಡಿಎನ್‌ಪಿ ಕ್ಯಾಪಿಟಲ್‌ನಲ್ಲಿ ಹಣ ವಿನಿಯೋಗಿಸಿದ್ರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದರು. ಜಾಹೀರಾತು ನಂಬಿ ವಾಟ್ಸಪ್ ಗ್ರೂಪ್ ಸೇರಿ ಪ್ರೊಫೈಲ್ ಐಡಿ ಕ್ರಿಯೇಟ್ ಮಾಡಿಕೊಂಡಿರುವ ಶಿವರಾಜ್, ಮೊದಲ ದಿನ 10 ಸಾವಿರ ರೂ. ಹಣ ಹಾಕಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವರಾಜ್‌ಗೆ ಅದೇ ದಿನ 1 ಲಕ್ಷ ಹಣ ಖಾತೆಗೆ ಹಾಕಿ ವಂಚಕರು ನಂಬಿಸಿದ್ದರು.
75.20 ಲಕ್ಷ ಹಣ ಕಳೆದುಕೊಂಡ ಶಿವರಾಜ್: ನಂತರ ಬ್ಯಾಂಕ್‌ಗೆ ಹೋಗಿ ಹಣ ವಿಥ್ ಡ್ರಾ ಮಾಡಿಕೊಂಡು ಕುಟುಂಬ ಸದಸ್ಯರ ಜೊತೆಗೆ ಶಿವರಾಜ್ ಚರ್ಚಿಸಿ, ಬಳಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಲಾಭ ಹಾಗೂ ಕಂಪನಿ ನೈಜತೆ ಬಗ್ಗೆ ವಿವರ ಪಡೆದುಕೊಂಡಿದ್ದು, ಹಂತಹಂತವಾಗಿ ಸೈಬರ್ ವಂಚಕರ ಖಾತೆಗೆ 75.20 ಲಕ್ಷ ಹಣವನ್ನ ಶಿವರಾಜ್ ಹಾಕಿದ್ದಾರೆ. ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡ ಶಿವರಾಜ್ ಈಗ ಸಿಇಎನ್ ಪೊಲೀಸರ ಮೊರೆ ಹೋಗಿದ್ದಾರೆ.
ಮತ್ತೊಂದೆಡೆ ಗೋಕಾಕ ಮೂಲದ ಉದ್ಯಮಿ ಬಾಬುರಾವ್‌ಗೂ ವಂಚಕರು ಪಂಗನಾಮ ಹಾಕಿದ್ದಾರೆ. ಟ್ರೇಡಿಂಗ್‌ನಲ್ಲಿ ಒಳ್ಳೆಯ ಲಾಭ ಆಗುತ್ತದೆ ಎಂದು ಬಾಬುರಾವ್ ಕೇಳಿದ್ದಾರೆ. ಹೀಗಾಗಿ ಟ್ರೇಡಿಂಗ್ ಮಾಡುವವರ ಪರಿಚಯ ಮಾಡಿಕೊಳ್ಳಲು ಟೆಲಿಗ್ರಾಂ ಆ್ಯಪ್‌ನಲ್ಲಿ ಸರ್ಚ್ ಮಾಡಿದ್ದಾರೆ.
27.50 ಲಕ್ಷ ಹಣ ಕಳೆದುಕೊಂಡ ಬಾಬುರಾವ್: ಆಗ ಟೆಲಿಗ್ರಾಂನಲ್ಲಿ ಬಾಬುರಾವ್‌ಗೆ ವಂಚಕರ ಪರಿಚಯ ಆಗಿದೆ. ವಾಟ್ಸಪ್ ನಂಬರ್ ಪಡೆದು ಅಲ್ಲಿಯೂ ಗ್ರೂಪ್‌ಗೆ ಸೇರಿರುವ ಬಾಬುರಾವ್ ವಂಚಕರ ಸಲಹೆಯಂತೆ ಕೆಕೆಆರ್‌ಎಂಎಫ್ ವೆಬ್ಸೈಟ್ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಂತರ ಹಣ ಹೂಡಿಕೆ ಮಾಡಿದ್ರೆ ಲಾಭ ಬರುತ್ತದೆ ಎಂದು ತಿಳಿದು ಶಿವರಾಜ್ ಮಾದರಿಯಲ್ಲೇ ಮೋಸ ಹೋಗಿದ್ದು, ಬಾಬುರಾವ್ ಒಟ್ಟು 27.50 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಇದೇ ರೀತಿ ಪ್ರತಿಷ್ಠಿತ ಕಂಪನಿಯಲ್ಲಿ ಪ್ರೋಗ್ರಾಂ ಅಸೋಸಿಯೇಟ್ ಆಗಿರುವ ಚಿದಾನಂದಗೂ ಸೈಬರ್ ವಂಚಕರು ಮೋಸ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಚಿದಾನಂದಗೆ 58.34 ಲಕ್ಷ ಪಂಗನಾಮ ಹಾಕಿದ್ದಾರೆ. ಅಡೆಪ್ಟೆಡ್ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕಂಪನಿ ಹೆಸರಿನಲ್ಲಿ ಚಿದಾನಂದಗೆ ವರ್ಕ್ ಫ್ರಮ್ ಹೋಮ್ ಕೆಲಸದ ಆಫರ್ ನೀಡಿದ್ದಾರೆ.
ಬಳಿಕ ಇನ್ಸ್ಟಾಗ್ರಾಂನ ಪೇಜ್ ಸ್ಕ್ರೀನ್ ಶಾಟ್ ಕಳಿಸಿದರೆ ಹಣ ನೀಡುವುದಾಗಿ ವಂಚಕರು ನಂಬಿಸಿದ್ದಾರೆ. ಮೊದಲ ದಿನ ಚಿದಾನಂದ ಅವರ ಕೆವಿಜಿ ಬ್ಯಾಂಕ್ ಅಕೌಂಟಿಗೆ ವಂಚಕರು 210 ಹಣ ಸಂದಾಯ ಮಾಡಿದ್ದರು. ನಂತರ ಪ್ರೊಫೈಲ್ ಕ್ರಿಯೇಟ್ ಮಾಡಿಸಿ ಹಣ ಹೂಡಿದ್ರೆ ಹೆಚ್ಚಿನ ಲಾಭ ಬರುತ್ತೆ ಎಂದು ನಂಬಿಸಿದ್ದರು. ಆಗ ಒಂದು ಸಾವಿರ ರೂ. ಜಮಾ ಮಾಡಿದ್ದ ಚಿದಾನಂದಗೆ 1400 ರೂ. ಸಂದಾಯ ಮಾಡಿದ್ದಾರೆ. ಹೀಗೆ ಹೆಚ್ಚಿನ ಲಾಭದ ಆಸೆಗೆ 58.34 ಲಕ್ಷ ಹಣ ಕಳೆದುಕೊಂಡಿದ್ದಾರೆ ಎಂದು ಎಸ್ಪಿ ಗುಳೇದ್ ತಿಳಿಸಿದರು.
ಸೈಬರ್ ವಂಚಕರಿಂದ ಮೂವರಿಗೂ ಪಂಗನಾಮ: ಹೆಚ್ಚಿನ ಲಾಭದ ಆಮಿಷವೊಡ್ಡಿದ ಸೈಬರ್ ವಂಚಕರು ಮೂವರಿಗೂ ಪಂಗನಾಮ ಹಾಕಿದ್ದಾರೆ. ಒಂದೇ ದಿನದಲ್ಲಿ ಹೆಚ್ಚಿನ ಲಾಭ ಕೊಡಲು ಯಾವ ಕಂಪನಿಗಳಿಂದಲೂ ಸಾಧ್ಯವಿಲ್ಲ. ಸಾರ್ವಜನಿಕರು ಈ ಸಂಗತಿಯನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಸೈಬರ್ ವಂಚಕರ ಮೂಲ, ನೆಲೆ ಕಂಡುಹಿಡಿಯುವುದು ಕಷ್ಟ. ಇಂಥ ಆಸೆ- ಆಮಿಷಗಳಿಗೆ ಜನ ಒಳಗಾಗಬಾರದು ಎಂದು ಎಸ್ಪಿ ಕೇಳಿಕೊಂಡರು.
ಒಂದು ವೇಳೆ ಕಳೆದುಕೊಂಡವರು ತಕ್ಷಣವೇ ಕಂಟ್ರೋಲ್ ರೂಂ 1930 ನಂಬರ್‌ಗೆ ಕಾಲ್ ಮಾಡಬೇಕು. ಹಣ ಕಳೆದುಕೊಂಡು ಬಹಳ ದಿನಗಳ ಬಳಿಕ ದೂರು ನೀಡಲು ಬಂದ್ರೆ ರಿಕವರಿ ಕಷ್ಟವಾಗುತ್ತದೆ. ಆದಷ್ಟು ಬೇಗ ಬಂದು ದೂರು ನೀಡಿದ್ರೆ ವಂಚಕರ ಅಕೌಂಟ್ ಪ್ರೀಜ್ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ವಂಚಕರು ಹಣ ವಿಥ್ ಡ್ರಾ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತು, ಆಮಿಷಗಳ ಮೋಸಕ್ಕೆ ಯಾರೂ ಸಿಲುಕಬಾರದು ಎಂದು ಸಾರ್ವಜನಿಕರಲ್ಲಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸಾಲ ತೀರಿಸಲು ಡ್ರಗ್ಸ್ ದಂಧೆಗಿಳಿದ ಎಂಬಿಎ ಪದವೀಧರ.. ಬೆಂಗಳೂರಲ್ಲಿ ಆರೋಪಿ ಬಂಧನ