ತುಮಕೂರು: 32 ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್ ಕಾನ್ಸ್ಟೇಬಲ್ಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರು ಅಭಿನಂದನೆ ಸಲ್ಲಿಸಿ, ಪ್ರಶಂಸನಾ ಪತ್ರ ನೀಡಿದ್ದಾರೆ.
ಮಂಜೇಶ್ ಎಂಬಾತ ಬಂಧಿತ ಕಳ್ಳ. ಈತನನ್ನು ಪತ್ತೆ ಹಚ್ಚಿ ಬಂಧಿಸುವಾಗ ಪೊಲೀಸ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯ ತೋರಿದ ಸಾಹಸಕ್ಕೆ ಜನಮೆಚ್ಚುಗೆ ವ್ಯಕ್ತವಾಗಿತ್ತು.
ಎಸ್ಪಿ ಕೆ.ವಿ.ಅಶೋಕ್ ಈ ಕುರಿತು ಮಾತನಾಡಿ, "ವೃದ್ದೆಯರು ಅಥವಾ ಎಟಿಎಂ ಬಳಿ ಯಾರಾದ್ರೂ ಅನಕ್ಷರಸ್ಥರು ಬಂದಾಗ ಅವರಿಂದ ಆರೋಪಿ ಹಣ, ಒಡವೆ ದೋಚುತ್ತಿದ್ದ. ಆತನ ಕ್ರಿಮಿನಲ್ ಹಿಸ್ಟರಿ ಗಮನಿಸಿದಾಗ ತುಮಕೂರು, ಹೆಬ್ಬೂರು, ಕೊರಟಗೆರೆ ಪೊಲೀಸ್ ಸ್ಟೇಷನ್ನಲ್ಲಿ ಸುಮಾರು 7 ಪ್ರಕರಣಗಳಲ್ಲಿ ನಮಗೆ ಬೇಕಾಗಿದ್ದ. ಇದನ್ನು ಹೊರತುಪಡಿಸಿ ಬೆಂಗಳೂರು ನಗರದಲ್ಲೂ ಹಲವು ಕೇಸ್‌ನಲ್ಲಿ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಾನೆ. ಸಿಸಿಟಿವಿಯಲ್ಲಿ ಬೈಕ್ನ ನಂಬರ್ ಪತ್ತೆಯಾಗಿತ್ತು. ಅದನ್ನು ಆಧರಿಸಿ ಫಾಲೋ ಮಾಡುತ್ತಿದ್ದಾಗ ಆತ ಬೆಂಗಳೂರಿಗೆ ಹೋಗಿರುವುದು ಗೊತ್ತಾಗಿದೆ" ಎಂದು ವಿವರ ನೀಡಿದರು.
"ಬೆಂಗಳೂರಿನಲ್ಲಿ ನಮ್ಮ ಪೊಲೀಸ್ ಕಮಾಂಡ್ ಕಂಟ್ರೋಲ್ ಆ ನಂಬರ್ ಅನ್ನು ಟ್ರ್ಯಾಕಿಂಗ್ ಮಾಡಿದ್ದಾರೆ. ಆಗ ಅದು ಸದಾಶಿವನಗರ ಹಾಗೂ ರಾಮಯ್ಯ ಪ್ರದೇಶದಲ್ಲಿ ಕಂಡುಬಂದಿದೆ. ಆ ನಂತರ ದೊಡ್ಡಲಿಂಗಯ್ಯ ಹಾಗೂ ಮೋಹನ್ ಎಂಬವರನ್ನು ಕಳೆದ 45 ದಿನಗಳಿಂದ ಈ ಕೇಸ್ಗೆ ಸಂಬಂಧಿಸಿದಂತೆ ಫಾಲೋ ಅಪ್ಗೆ ಬಿಟ್ಟಿದ್ದೆವು. ಸ್ಮಾರ್ಟ್ ಸಿಟಿ ವರ್ಕ್ ಮಾಡುತ್ತಿದ್ದ ಇಂಜಿನಿಯರ್ ಮಾಹಿತಿ ನೀಡಿದಾಗ ನಮ್ಮವರು ಜಂಕ್ಷನ್ನಲ್ಲಿ ಕಾಯುತ್ತಿದ್ದರು. ಆರೋಪಿಯನ್ನು ಹಿಡಿದುಕೊಳ್ಳಲು ಹೋಗುವಾಗ ಆತ ಪರಾರಿಯಾಗಲು ಪ್ರಯತ್ನಪಟ್ಟಿದ್ದಾನೆ" ಎಂದು ಹೇಳಿದರು.
"ಆಗ ಅಲ್ಲೇ ಇದ್ದ ಸದಾಶಿವನಗರ ಟ್ರಾಫಿಕ್ ಠಾಣಾ ಮಹಿಳಾ ಎಎಸ್‌ಐ ಹಾಗೂ ಹೋಂ ಗಾರ್ಡ್ ಸಹಾಯದಿಂದ ಹಿಡಿದಿದ್ದಾರೆ. ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ" ಎಂದು ತಿಳಿಸಿದರು.
ಕಾನ್ಸ್ಟೇಬಲ್ಗಳಾದ ದೊಡ್ಡಲಿಂಗಯ್ಯ ಹಾಗು ಮೋಹನ್ ಅವರಿಗೆ ಪ್ರಶಂಸನಾ ಪತ್ರ ನೀಡಿದ ಎಸ್ಪಿ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಪದಕಕ್ಕೂ ಶಿಫಾರಸು ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: 32 ಪ್ರಕರಣಗಳ ಖತರ್ನಾಕ್ ಕಳ್ಳ ಅರೆಸ್ಟ್: ಸಾಹಸ ತೋರಿದ ಕಾನ್ಸ್ಟೇಬಲ್ಗೆ ಮೆಚ್ಚುಗೆ - Thief arrest