ಮೈಸೂರು: ಜಾರಿ ನಿರ್ದೇಶನಾಲಯವು ಮುಡಾದ 300 ಕೋಟಿ ಮೌಲ್ಯದ 142 ನಿವೇಶನಗಳನ್ನ ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ನನ್ನ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ. ನಾನು ಮಾಡಿದ ಆರೋಪ ಸಾಬೀತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಿವೇಶನಗಳನ್ನ ವಶಪಡಿಸಿಕೊಳ್ಳಲಿದೆ. ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, 142 ನಿವೇಶನಗಳು ಯಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮ ನಿವೇಶನಗಳನ್ನ ಇಡಿ ವಶಕ್ಕೆ ಪಡೆಯುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ನಾನು ಇಡಿಗೆ ದೂರು ಸಲ್ಲಿಸಿದಾಗ ಇವೆಲ್ಲಾ ಸುಳ್ಳು ಆರೋಪ, ರಾಜಕೀಯ ಪ್ರೇರಿತ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ಆದರೂ ಕಾನೂನು ಹೋರಾಟ ಮುಂದುವರೆಸಿದ್ದೇನೆ. ಎಲ್ಲಾ ಅಕ್ರಮ ನಿವೇಶನಗಳು ಮತ್ತೆ ಮುಡಾಗೆ ಬರುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ನಾನು ಮನವಿ ಮಾಡಿದ್ದರೂ ಲೋಕಾಯುಕ್ತ ಪೊಲೀಸರು ಕೇವಲ ಸಿಎಂ ಪ್ರಕರಣವನ್ನು ಮಾತ್ರ ತನಿಖೆ ನಡೆಸುತ್ತಿದ್ದಾರೆ. ಸಮಗ್ರ ಮುಡಾ ಹಗರಣವನ್ನ ತನಿಖೆ ಮಾಡಬೇಕು ಎಂದು ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದರು.
ನನಗೆ ಯಾವುದೇ ಜೀವ ಭಯ ಇದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಹೋರಾಟ ಮುಂದುವರೆಯಲಿದೆ. ನನ್ನ ಫೋನ್ ಸಹ ಟ್ಯಾಪ್ ಆಗುತ್ತಿದೆ ಎಂದ ಅವರು, ಮುಡಾ ಅಕ್ರಮಗಳ ಬಗ್ಗೆ ಬಾಕಿ ಇರುವ ಸಿಬಿಐ ವಿಚಾರಣೆ ಇದೇ ತಿಂಗಳ 27 ರಂದು ನಡೆಯಲಿದ್ದು, ಅಂದೇ ತೀರ್ಪು ಬರುವ ನಿರೀಕ್ಷೆಯಿದೆ. ಪ್ರಕರಣ ಸಿಬಿಐಗೆ ವಹಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮೂಡಾ ಪ್ರಕರಣ: 300 ಕೋಟಿ ಮೌಲ್ಯದ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡ ED - ED ATTACHED 142 PROPERTIES