ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ದಾಖಾಲಾಗಿರುವ ಎಫ್ಐಆರ್ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಲೋಕಾಯುಕ್ತ ಕಚೇರಿಗೆ ಇಂದು 25 ಪುಟಗಳ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಲೋಕಾಯುಕ್ತರಿಗೆ ನೀಡಿದ್ದೇನೆ. ಸಿಎಂ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯ ಅಂಶಗಳನ್ನು ಉಲ್ಲೇಖ ಮಾಡಿರುವ ಮಾಹಿತಿಯನ್ನ ಲೋಕಾಯುಕ್ತ ಎಸ್ಪಿ ಅವರಿಗೆ 25 ಪುಟದಲ್ಲಿ ನೀಡಿದ್ದೇನೆ. ಹೈಕೋರ್ಟ್ನಲ್ಲಿ ಸಿಎಂ ಮಾಹಿತಿಯನ್ನು ಕೊಡದೇ ಮುಚ್ಚಿಟ್ಟಿದ್ದಾರೆ. ಆ ಅಂಶಗಳನ್ನು ಸಹ ನಾನು ಲೋಕಾಯುಕ್ತರಿಗೆ ಪತ್ರದ ಮೂಲಕ ಕೊಟ್ಟಿದ್ದೇನೆ. ವೈಟ್ನರ್ ಹಾಕಿರುವ ವಿಚಾರವನ್ನು ಸಹ ಮುಚ್ಚಿಟ್ಟಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಈ 25 ಪುಟಗಳ ಮಾಹಿತಿ ನೀಡಿದ್ದೇನೆ ಎಂದರು.
ಮುಖ್ಯಮಂತ್ರಿಗಳು ಪ್ರಚೋದನಾತ್ಮಕ ಭಾಷಣ ಮತ್ತು ಜಾಹೀರಾತು ನೀಡುತ್ತಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಭಯವಿದೆ. ಹಾಗಾಗಿ ಕೂಡಲೇ ಮುಖ್ಯಮಂತ್ರಿಯನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಲೋಕಾಯುಕ್ತ ಕಚೇರಿಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಅವರು ಪದೇ ಪದೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ ಕೂಡಲೇ ಲೋಕಾಯುಕ್ತ ಕಚೇರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಿಸಿಟಿವಿ ಆಳವಡಿಕೆ ಮಾಡಬೇಕು ಎಂಬ ಮನವಿಯನ್ನು ಸಹ ಮಾಡಿರುವುದಾಗಿ ಸ್ನೇಹಮಯಿ ಕೃಷ್ಣ ಹೇಳಿದರು.
ಇದನ್ನೂ ಓದಿ: ಸಿಎಂ ತೆರಳುತ್ತಿದ್ದ ಮಾರ್ಗದಲ್ಲಿ ಪ್ರತಿಭಟನೆ: ಬಳ್ಳಾರಿಯಲ್ಲಿ ಭೂ ಸಂತ್ರಸ್ತ ಹೋರಾಟಗಾರರು ಪೊಲೀಸ್ ವಶಕ್ಕೆ