ಮೈಸೂರು: ಮುಡಾದ 50:50 ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಕುಟುಂಬದ ಪ್ರಕರಣದಲ್ಲಿ ಇಡಿ ಲೋಕಾಯುಕ್ತಕ್ಕೆ ಬರೆದಿರುವ ಪತ್ರದ ಹಿನ್ನೆಲೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಮತ್ತೊಂದು ದೂರು ದಾಖಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಮೈಸೂರು ಲೋಕಾಯುಕ್ತರಿಗೆ ಇಂದು ಮತ್ತೊಂದು ಮನವಿ ಪತ್ರ ನೀಡಿದ್ದಾರೆ.
ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಇಂದು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, "ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಇತರ ವಿಚಾರಗಳ ಬಗ್ಗೆ, ಇಡಿ ತನಿಖೆ ನಡೆಸಿದ ನಂತರ ತನಿಖೆಯಲ್ಲಿ ಕಂಡುಬಂದ ಕೆಲವು ಅಂಶಗಳ ಮೇಲೆ ಮೈಸೂರು ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಈ ಪತ್ರದ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಮಯ್ಯ ಹಾಗೂ ಇತರ ಆರೋಪಿಗಳ ವಿರುದ್ಧ ಮತ್ತೊಂದು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.
ನಂತರ ಮಾಧ್ಯಮಾಗಳ ಜತೆ ಮಾತನಾಡಿ, ಚೌಧರಿ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಕೋರ್ಟ್ ತೀರ್ಪು ಅಂಶಗಳನ್ನು ಉಲೇಖಿಸಿದ ಅವರು, "ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಚರ್ಚೆ ನಡೆಸಿ 565 ಪುಟಗಳ ತೀರ್ಪನ್ನು ನ್ಯಾಯಾಲಯ ಈ ಪ್ರಕರಣದಲ್ಲಿ ನೀಡಿದೆ. ಆ ತೀರ್ಪಿನ 53ನೇ ಕಂಡಿಕೆಯಲ್ಲಿ ED ತನಿಖೆ ಮಾಡುವ ಸಮಯದಲ್ಲಿ ಅವರಿಗೆ ಕಂಡುಬಂದ ಸನ್ನೆಯ, ಆ ಸನ್ನೆಗೆ ಸಂಬಂಧಿಸಿದಂತೆ ಸ್ಥಳೀಯ ತನಿಖೆ ಸಂಸ್ಥೆಗೆ ಮಾಹಿತಿ ನೀಡಿದಾಗ, ಸ್ಥಳೀಯ ತನಿಖಾ ಸಂಸ್ಥೆಯು ಮತ್ತೊಂದು ಪ್ರಕರಣ ದಾಖಲು ಮಾಡಿದೆ. ಈಗಾಗಲೇ ಒಂದು ಪ್ರಕರಣ ದಾಖಲಾಗಿದ್ದರೂ ಮತ್ತೊಂದು ಪ್ರಕರಣ ದಾಖಲು ಮಾಡಬಹುದು ಎಂದು ಆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ತೀರ್ಪಿನ ಅನ್ವಯ ಸಿದ್ದರಾಮಯ್ಯ ಮತ್ತು ಇತರ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲು ಮಾಡಬೇಕು ಎಂದು ಲೋಕಾಯುಕ್ತ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದ್ದೇನೆ" ಎಂದು ಹೇಳಿದರು.
"ಮನವಿ ಪತ್ರ ಸಲ್ಲಿಸುವ ವೇಳೆ, ಲೋಕಾಯುಕ್ತ ಎಸ್.ಪಿ. ಉದೇಶ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಹೀಗಾಗಿ ಅವರ ಕಚೇರಿಗೆ ಮನವಿ ಪತ್ರ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡಬೇಕಾಗಿದೆ" ಎಂದರು.
ಇದನ್ನೂ ಓದಿ: ಮುಡಾ ಹಗರಣ: ಮೈಸೂರು ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ ಸ್ನೇಹಮಯಿ ಕೃಷ್ಣ