ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಕಲ್ಲುನಾಗರಕ್ಕೆ ಹಾಲೆರೆಯುತ್ತೀರಿ, ನಿಜ ಜೀವನದಲ್ಲಿ ನಾಗರ ಹಾವು ಕಂಡರೆ ಕೊಲ್ಲಲು ಮುಂದಾಗುತ್ತೀರಿ. ಈ ರೀತಿ ಹಾವುಗಳನ್ನು ಕೊಲ್ಲುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಸ್ನೇಕ್ ಕೃಷ್ಣರೆಡ್ಡಿ ಸ್ನೇಹಿತರ ಬಳಗ ಸಾರ್ವಜನಿಕರಿಗೆ ಅರಿವು ಮೂಡಿಸಿತು.
ಹಾವುಗಳು ಪರಿಸರ ಸಮತೋಲನದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಅವುಗಳಿಲ್ಲದೆ ಹೋದರೆ ರೈತರು ಬೆಳೆಯುವ ಬೆಳೆಗಳಲ್ಲಿ ಶೇ 25ರಷ್ಟು ಆಹಾರವೂ ನಮಗೆ ಸಿಗಲಾರದು. ಏಕೆಂದರೆ ಅವೆಲ್ಲಾ ಇಲಿಗಳ ಪಾಲಾಗುತ್ತಿತ್ತು. ಹಾಗಾಗಿ, ಹಾವುಗಳನ್ನು ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.
ಎಲ್ಲ ಹಾವುಗಳು ವಿಷಕಾರಿಯಲ್ಲ: ಪರಿಸರದಲ್ಲಿರುವ ಶೇ 10ರಷ್ಟು ಹಾವುಗಳು ಮಾತ್ರ ವಿಷಕಾರಿಯಾಗಿವೆ. ಅಷ್ಟೇ ಅಲ್ಲದೇ, ತಮ್ಮ ಜೀವಕ್ಕೆ ಕುತ್ತು ಬಂದಾಗ ಮಾತ್ರ ಅವು ದಾಳಿ ಮಾಡುತ್ತವೆ ಎಂದು ತಿಳಿಸಿದರು.
ಹಾವು ಕಚ್ಚಿದರೆ ಏನು ಮಾಡಬೇಕು?: ಹಾವುಗಳು ಕಚ್ಚಿದಾಗ ಹೆಚ್ಚು ಭಯ ಬೇಡ. ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ದಾಖಲಾಗಬೇಕು. ಕಚ್ಚಿದಾಗ ಅವುಗಳ ಹಲ್ಲುಗಳು ಮೂಡಿರುವ ಸಂಖ್ಯೆಯ ಮೇಲೆ ಅದು ವಿಷಕಾರಿಯೇ ಅಥವಾ ಸಾಮಾನ್ಯ ಹಾವೇ ಎಂದು ಗೊತ್ತಾಗುತ್ತದೆ ಎಂದು ಉರಗಪ್ರೇಮಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ಇನ್ನು ಮುಂದೆ ಗ್ರಾಮದಲ್ಲಿ ಹಾವು ಕಾಣಿಸಿಕೊಂಡರೆ ಉರಗಪ್ರೇಮಿಗಳಿಗೆ ಕರೆಮಾಡಿ, ಹಾವುಗಳನ್ನು ಕಾಡಿಗೆ ಬಿಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ, ಹಾವುಗಳ ಆಹಾರ ಕ್ರಮವೇನು? ಜೀವಿತಾವಧಿ ಸೇರಿದಂತೆ ಹಲವು ಕುತೂಹಲಕಾರಿ ವಿಷಯಗಳನ್ನೂ ತಿಳಿಸಲಾಯಿತು. ಗ್ರಾಮದ ಕೆಲವರು ನಿಜನಾಗನಿಗೆ ಪೂಜೆ ಸಲ್ಲಿಸಿದರು.
ಉರಗತಜ್ಞ ಕೃಷ್ಣರೆಡ್ಡಿ ಮಾತನಾಡಿ, "ಹಾವಿನ ಭಯದಿಂದ ಅವುಗಳನ್ನು ಹೊಡೆದು ಸಾಯಿಸುತ್ತಿದ್ದರು. ಹೀಗಾಗಿ ಅವುಗಳ ಮಹತ್ವ ತಿಳಿಸುತ್ತಿದ್ದೇವೆ. ಅವುಗಳನ್ನು ಕಾಡಿಗೆ ಬಿಟ್ಟು ಬರುವ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಜನರೂ ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಯಾರೊಬ್ಬರೂ ಕೂಡಾ ಹಾವನ್ನು ಹೊಡೆಯುವುದಿಲ್ಲ. ಅವುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದಾರೆ. ಇವತ್ತು ನಾಗರ ಪಂಚಮಿಯಾದ್ದರಿಂದ ನಿಜ ನಾಗರನಿಗೆ ಹಾಲೆರೆದಿದ್ದೇವೆ" ಎಂದರು.
ಶಿಕ್ಷಕ ಮಹಾಂತೇಶ್ ಮಾತನಾಡಿ, "ಹಾವುಗಳು ರೈತಸ್ನೇಹಿ ಎಂಬುದನ್ನು ನಾವು ಕಂಡುಕೊಳ್ಳಬೇಕು. ಪರಿಸರ ವ್ಯವಸ್ಥೆಯಲ್ಲಿ ಅವುಗಳು ಅತ್ಯುತ್ತಮ ಪಾತ್ರವಹಿಸುತ್ತವೆ. ರೈತರ ಬೆಳೆ ತಿನ್ನುವ ಇಲಿಗಳನ್ನು ಹಾವುಗಳು ತಿನ್ನುತ್ತವೆ. ಇಲಿಗಳ ಸಂತತಿ ಕಡಿಮೆಗೊಳಿಸುವಲ್ಲಿ ಹಾವುಗಳ ಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ, ಹಾವುಗಳನ್ನು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ" ಎಂದು ಹೇಳಿದರು.