ಶಿವಮೊಗ್ಗ: ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್ ಅನೇಕ ಅಡೆತಡೆಗಳ ನಡುವೆ ಶಿವಮೊಗ್ಗ ನಗರವನ್ನು ಅಂದಗೊಳಿಸಿದೆ. ಇದೀಗ ಶಿವಮೊಗ್ಗ ನಗರದ ನಿವಾಸಿಗಳನ್ನು ಫಿಟ್ ಮಾಡಲು ಪಬ್ಲಿಕ್ ಬೈಕ್ ಶೇರಿಂಗ್ ಸಿಸ್ಟಮ್ ಜಾರಿಗೊಳಿಸಿದೆ. ಇದಕ್ಕಾಗಿ ನಗರದಲ್ಲಿ 30 ಕಡೆ ಸೈಕಲ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಒಟ್ಟು 300 ಸೈಕಲ್ಗಳನ್ನು ಇರಿಸಲಾಗಿದೆ. ಅಂದಾಜು 4.43 ಕೋಟಿ ರೂ. ವೆಚ್ಚದಲ್ಲಿ ವಿವಿಧೆಡೆ ಸೈಕಲ್ ಸ್ಟೇಷನ್‌ಗಳನ್ನು ಮಾಡಲಾಗಿದೆ. ಇದು ನಗರವರಷ್ಟೆ ಅಲ್ಲದೆ ಗ್ರಾಮಾಂತರ ಪ್ರದೇಶಗಳಿಂದ ಬರುವವರಿಗೂ ಅನುಕೂಲವಾಗಲಿದೆ. 300 ಪೆಡಲ್ ಸೈಕಲ್ ಮತ್ತು 30 ಎಲೆಕ್ಟ್ರಾನಿಕ್ ಬೈಸಿಕಲ್‌ಗಳು ಪ್ರಸ್ತುತ ಲಭ್ಯವಿವೆ.
ಮೊಬೈಲ್ ಆ್ಯಪ್ ಮೂಲಕ ಬಳಕೆ: ನೀವು ಈ ಸೈಕಲ್ ಸೇವೆ ಪಡೆಯಬೇಕಾದರೆ www.yaana. bike ಎಂಬ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ನೀಡಿದ ಮೇಲೆ ಒಂದು ಕ್ಯೂ ಆರ್ ಕೋಡ್ ಲಭ್ಯವಾಗುತ್ತದೆ. ಇದರಿಂದ ಸೈಕಲ್ ಅನ್ಲಾಕ್ ಆಗುತ್ತದೆ. ಆಗ ನೀವು ಸೈಕಲ್ ಅನ್ನು ಬಳಸಬಹುದಾಗಿದೆ. ಇದು ಸಂಪೂರ್ಣ ಜಿಪಿಆರ್ಎಸ್ ವ್ಯವಸ್ಥೆ ಹೊಂದಿದೆ. ಇದರಿಂದ ಸೈಕಲ್ ಅನ್ನು ಎಲ್ಲಿ ಬಿಟ್ಟು ಹೋದರೂ ಅದರ ಮಾಹಿತಿ ಲಭ್ಯವಾಗುತ್ತದೆ. ಮೊದಲ ಅರ್ಧ ಗಂಟೆ ಬಳಕೆ ಉಚಿತವಾಗಿರುತ್ತದೆ. ನಂತರ ಅದಕ್ಕೆ ಹಣ ನೀಡಬೇಕಾಗುತ್ತದೆ.
ಸೈಕಲ್ ನಿರ್ವಹಣೆ ಖಾಸಗಿ ಕಂಪನಿಗೆ ಹೊಣೆ: ಸ್ಮಾರ್ಟ್ ಸಿಟಿ ವತಿಯಿಂದ ಸೈಕಲ್ ನಿರ್ವಹಣೆಯನ್ನು ಖಾಸಗಿ ಕಂಪನಿಯೊಂದಕ್ಕೆ 5 ವರ್ಷಗಳ ಕಾಲಕ್ಕೆ ನೀಡಲಾಗಿದೆ. ಸೈಕಲ್ ಬಾಡಿಗೆ ಪಡೆಯುವುದರಾದಿಯಾಗಿ ಎಲ್ಲವೂ ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿದೆ. ಆಯಾ ಬೈಸಿಕಲ್ ಸ್ಟೇಷನ್‌ಗಳಲ್ಲಿ ಇದರ ಮಾಹಿತಿ ಫಲಕಗಳನ್ನು ಆಯಾ ಸೈಕಲ್ ಸ್ಟ್ಯಾಂಡ್ಗಳ ಬಳಿಯೇ ಅಳವಡಿಸಲಾಗಿದೆ. ಇದನ್ನು ನೋಡಿ ನೀವು ಸೈಕಲ್ ಬಳಸಬಹುದಾಗಿದೆ. ಸೈಕಲ್ ಓಡಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಅಲ್ಲದೇ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಈಗಾಗಲೇ ಸೈಕಲ್ ಅನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಗರದಾದ್ಯಂತ ಟ್ರಿಣ್ ಟ್ರಿಣ್ ಸದ್ದು ಎಲ್ಲ ಕಡೆ ಕೇಳಿ ಬರುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಸ್ಮಾರ್ಟ್ ಸಿಟಿಯ ಎಂ.ಡಿ. ಮಾಯಾಣ್ಣ ಗೌಡ, "ಪಬ್ಲಿಕ್ ಬೈಕ್ ಶೇರಿಂಗ್ ಸಿಸ್ಟಮ್ ಅನ್ನು ಸ್ಮಾರ್ಟ್ ಸಿಟಿ ತಂದಿದೆ. ನಗರದಲ್ಲಿ ಸುಮಾರು 330 ಸೈಕಲ್ಗಳಿವೆ. ಅದರಲ್ಲಿ 300 ಸೈಕಲ್ ಪೆಡ್ಲಿಂಗ್ ಮಾಡಿಕೊಂಡು ಹೋಗುವಂತದ್ದು, ಉಳಿದ 30 ಬ್ಯಾಟರಿ ಚಾಲಿತ ಸೈಕಲ್ಗಳಿವೆ. ಇವುಗಳನ್ನು ನಗರದ 30 ಕಡೆ ಸ್ಟ್ಯಾಂಡ್ ಮಾಡಿ ಇಡಲಾಗಿದೆ.
ಈ ಸೈಕಲ್ ಬಳಸುವವರು ಮೊಬೈಲ್ ಆ್ಯಪ್ ಬಳಸಬೇಕಿದೆ. ಟೆಕ್ನಾಲಜಿ ಬಳಸುವವರು ಈ ಸೈಕಲ್ಗಳನ್ನು ಬಳಕೆ ಮಾಡಬಹುದಾಗಿದೆ. ಮೊಬೈಲ್ ಆ್ಯಪ್ ಇಲ್ಲದೇ ಹೋದರೆ ಇವುಗಳನ್ನು ಬಳಸಲು ಅಗುವುದಿಲ್ಲ. ಬ್ಯಾಟರಿ ಚಾಲಿತ ಸೈಕಲ್ ಮೊದಲ 30 ನಿಮಿಷ ಉಚಿತವಾಗಿರುತ್ತದೆ. ನಂತರದ 30 ನಿಮಿಷಕ್ಕೆ 15 ರೂ., ಪೆಡ್ಲಿಂಗ್ ಸೈಕಲ್ಗೆ 30 ನಿಮಿಷಕ್ಕೆ 5 ರೂ. ಇರುತ್ತದೆ. ಸೈಕಲ್ ಓಡಿಸುವುದರಿಂದ ಆರೋಗ್ಯದ ಜೊತೆ ಪರಿಸರದ ಸಂರಕ್ಷಣೆ ಕೂಡ ಆಗುತ್ತದೆ. ಇದನ್ನು ಪಬ್ಲಿಕ್ ಪಾರ್ಟ್ನರ್ಶಿಪ್ನಿಂದ ನಡೆಸುತ್ತಿರುವುದರಿಂದ ಸ್ಮಾರ್ಟ್ ಸಿಟಿಗೆ ಹೊರೆಯೂ ಆಗುವುದಿಲ್ಲ. ಇಲ್ಲಿ ಸೈಕಲ್ಗಳನ್ನು ನೋಡಿಕೊಳ್ಳಲು ಜಿಪಿಎಸ್ ಇರುವುದರಿಂದ ಇದಕ್ಕಾಗಿ ಪ್ರತ್ಯೇಕ ತಂಡ ಸಹ ಇರುತ್ತದೆ. ಜನತೆ ಇಂತಹ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿ" ಮಾಡಿಕೊಂಡಿದ್ದಾರೆ.
ಪಬ್ಲಿಕ್ ಬೈಕ್ ಶೇರಿಂಗ್ ಸಿಸ್ಟಮ್ ಕುರಿತು ಮಾತನಾಡಿದ ಸ್ಥಳೀಯ ವಿಜಯ ಕುಮಾರ್, "ಸ್ಮಾರ್ಟ್ ಸಿಟಿಯಿಂದ ಮಾಡಿರುವ ಪಬ್ಲಿಕ್ ಬೈಕ್ ಶೇರಿಂಗ್ ತುಂಬಾ ಅನುಕೂಲಕರವಾಗಿದೆ. ಇದರಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೊಗ್ಯ ವೃದ್ಧಿಯಾಗುತ್ತದೆ. ಇತ್ತಿಚೇಗೆ ವಿಶ್ವ ಆರೋಗ್ಯ ಸಂಸ್ಥೆ ಸೈಕ್ಲಿಂಗ್ ಮಾಡುವುದರಿಂದ ಹೃದಯಾಘಾತ ಕಡಿಮೆ ಅಗುತ್ತದೆ ಎಂಬ ವರದಿ ನೀಡಿದೆ. ಸೈಕಲ್ ಓಡಿಸುವುದರಿಂದ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಸ್ಮಾರ್ಟ್ ಸಿಟಿ ನೀಡಿರುವ ಸೈಕಲ್ ಎಲ್ಲ ಹೊಸತನದಿಂದ ಕೊಡಿದೆ. ಎಲ್ಲವೂ ಜಿಪಿಆರ್ಎಸ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಆ್ಯಪ್ ಮೂಲಕ ಸೈಕಲ್ ಬಳಕೆ ಮಾಡುವುದರಿಂದ ಸೈಕಲ್ ಬಳಕೆದಾರರು ಯಾರು, ಎಲ್ಲಿ ಬಳಕೆ ಮಾಡಿದರು ಎಂದು ತಿಳಿದು ಬರುತ್ತದೆ. ಜೊತೆಗೆ ಸೈಕಲ್ ಕಳ್ಳತನ ಆಗುವ ಅವಕಾಶ ಇರುವುದಿಲ್ಲ. ಇಲ್ಲಿ ಕಡಿಮೆ ದರಕ್ಕೆ ಸೈಕಲ್ ಲಭ್ಯವಾಗುತ್ತಿರುವುದು ಇನ್ನೂಂದು ಖುಷಿಯ ಸಂಗತಿಯಾಗಿದೆ. ಎಲ್ಲಾ ವಯೋಮಾನದವರೂ ಸೈಕಲ್ ಓಡಿಸುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ: ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಲೋಕಾರ್ಪಣೆ