ಬೆಂಗಳೂರು : ತಮ್ಮ ಅಧಿಕಾರಾವಧಿಯಲ್ಲಿ ಬಂದ ಹಲವಾರು ಸವಾಲುಗಳ ಮಧ್ಯೆಯೂ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷ ಅಧಿಕಾರದ ವೇಳೆ ಕರ್ನಾಟಕವನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅದರಲ್ಲೂ ಬೆಂಗಳೂರನ್ನು ಐಟಿ - ಬಿಟಿ ಕ್ಷೇತ್ರದಲ್ಲಿ ವಿಶ್ವದ ಸಿಲಿಕಾನ್ ಸಿಟಿಯಾಗಿ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಕಾರಣೀಭೂತರಾದರು. ಅಲ್ಲದೇ, ರಾಜಧಾನಿಯನ್ನು ಸಿಂಗಪೂರ್ ಮಾದರಿ ನಗರವನ್ನಾಗಿಸುವ ಕಾರ್ಯಕ್ಕೂ ಮುಂದಾಗಿದ್ದರು. ಎಸ್.ಎಂ.ಕೆ ಆಡಳಿತಾವಧಿಯಲ್ಲೇ ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ನಾಲ್ಕು ಪಥಗಳ ರಸ್ತೆ ಮಾರ್ಗ ನಿರ್ಮಾಣವಾಯಿತು.
ಏಕಗವಾಕ್ಷಿ ಯೋಜನೆ : ಏಕಗವಾಕ್ಷಿ ಯೋಜನೆಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ನೀಡಿದವರಲ್ಲಿ ಎಸ್.ಎಂ.ಕೃಷ್ಣ ಮೊದಲಿಗರು. ವಿದೇಶಗಳಲ್ಲಿ ಅಧ್ಯಯನ ನಡೆಸಿದ ಎಸ್ಎಂಕೆ ಅವರಿಗೆ ಆಡಳಿತದಲ್ಲಿ ಅಪಾರ ಅನುಭವವಿತ್ತು. 90ರ ದಶಕದಲ್ಲಿ ಫೈಲ್ ಇನ್ಸ್ಪೆಕ್ಟರ್ಸ್ ಎಂಬ ನಿಧಾನಗತಿಯ ಹಾವಳಿಯಿಂದ ಉದ್ಯಮಿಗಳು, ವ್ಯಾಪಾರಸ್ಥರು, ಹೂಡಿಕೆದಾರರು ಜರ್ಜರಿತರಾಗಿದ್ದರು.
ಕರ್ನಾಟಕದಲ್ಲಿ ಸಾಕಷ್ಟು ನೈಸರ್ಗಿಕ ಹಾಗೂ ಮಾನವ ಸಂಪನೂಲಗಳಿದ್ದವು. ಇದನ್ನು ಸದುಪಯೋಗಪಡಿಸಿಕೊಂಡು ಕೈಗಾರಿಕೋದ್ಯಮಕ್ಕೆ ವ್ಯಾಪಕ ಅವಕಾಶವಿದ್ದರೂ ರೆಡ್ ಟೇಪಿಸಂ ಎಂಬ ಹಾವಳಿ ಎಲ್ಲ ಅಭಿವೃದ್ಧಿಗಳನ್ನೂ ಆಮೆ ವೇಗದಲ್ಲಿ ನಿಲ್ಲಿಸಿಬಿಟ್ಟಿತ್ತು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಮಂಜೂರಾತಿ ಸಮಿತಿಗಳನ್ನು ರಚಿಸುವ ಮೂಲಕ ಕೈಗಾರಿಕೆಗಳಿಗೆ ಒಂದೇ ಸೂರಿನಡಿ ಕಂದಾಯ, ವಿದ್ಯುತ್, ಅಗ್ನಿಶಾಮಕ, ಅರಣ್ಯ, ಪರಿಸರ ಮಾಲಿನ್ಯ ಸೇರಿದಂತೆ ಹಲವು ರೀತಿಯ ಪ್ರಮಾಣಪತ್ರಗಳು ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಕೊಡುವ ವ್ಯವಸ್ಥೆಯನ್ನು ಏಕಗವಾಕ್ಷಿ ಪದ್ಧತಿ ಮೂಲಕ ಜಾರಿಗೆ ತಂದರು.
ಕೈಗಾರಿಕಾ ಕ್ರಾಂತಿಗೆ ಮುನ್ನುಡಿ: ಇದು ಕೈಗಾರಿಕಾ ವಲಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತ್ತು. ಕೇವಲ ಐಟಿ-ಬಿಟಿಯಷ್ಟೇ ಅಲ್ಲದೆ ಆಟೋಮೊಬೈಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಟೋಲ್ ಮೇಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯಾಯಿತು. ಇಂದು ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆದಾಯ ಹಾಗೂ ಜಿಎಸ್ ಟಿ ಪಾವತಿಸುವ ರಾಜ್ಯವಾಗಿದ್ದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ಏಕಗವಾಕ್ಷಿ ಪದ್ಧತಿ ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಎಸ್.ಎಂ.ಕೃಷ್ಣ ಅವರು ಅದೇ ತಂತ್ರಜ್ಞಾನವನ್ನು ಆಡಳಿತ ಹಾಗೂ ಜನಸಾಮಾನ್ಯರ ಬದುಕಿನ ಸುಧಾರಣೆಗೆ ಬಳಸುವ ಮೂಲಕ ಗಣನೀಯ ಸಾಧನೆ ಮಾಡಿದರು.
2001ರಲ್ಲಿ ಆರಂಭಗೊಂಡ ಭೂಮಿ ಸಾಫ್ಟ್ ವೇರ್ ಕಂದಾಯ ದಾಖಲಾತಿಗಳಲ್ಲಿ ಇಂದಿಗೂ ಅಗ್ರಗಣ್ಯವಾಗಿದೆ. ಜೊತೆಗೆ ಕಾಲಕಾಲಕ್ಕೆ ಉನ್ನತೀಕರಣದ ಮೂಲಕ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಂದಾಯ ದಾಖಲಾತಿಗಳನ್ನು ಕಾಗದರಹಿತವನ್ನಾಗಿ ಮಾಡುವ ಸಲುವಾಗಿ ರೂಪುಗೊಂಡ ಭೂಮಿ ಸಾಫ್ಟ್ ವೇರ್ ಇಂದಿಗೂ ಚಾಲ್ತಿಯಲ್ಲಿದೆ.
ಈ ಹಿಂದೆ ಒಂದು ಪಹಣಿ ಪಡೆಯಬೇಕಾದರೂ ವಾರಗಟ್ಟಲೆ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಧಿಕಾರಿಗಳ ಮರ್ಜಿಗಾಗಿ ಕಾಯಬೇಕಿತ್ತು. ಇದನ್ನು ತಪ್ಪಿಸಲು 2001 ಮತ್ತು 2002ನೇ ಸಾಲಿನಲ್ಲಿ ತಮ್ಮ ಬಜೆಟ್ನಲ್ಲಿ ಭೂಮಿ ಸಾಫ್ಟ್ ವೇರ್ ಘೋಷಿಸಿದ್ದರು. 2001ರ ಮಾರ್ಚ್ 31 ರಂದು ಅದಕ್ಕೆ ಆರಂಭಿಕವಾಗಿ ಕೆಲವೇ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, 2004ರ ವೇಳೆಗೆ ಅದು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬಂತು. ಇದೀಗ ಮೊಬೈಲ್ನಲ್ಲೇ ಪಹಣಿ ಪಡೆಯಬಹುದಾದಷ್ಟರ ಮಟ್ಟಿಗೆ ಭೂಮಿ ಸಾಫ್ಟ್ವೇರ್ ಅಭಿವೃದ್ಧಿಗೊಂಡಿದೆ. ಇದರ ರೂವಾರಿ ಎಸ್.ಎಂ.ಕೃಷ್ಣಾ ಅವರೇ ಆಗಿದ್ದಾರೆ.
ವಿಕಾಸಸೌಧ, ಉದ್ಯೋಗಸೌಧ ನಿರ್ಮಾಣ : ಒಂದೇ ಸೂರಿನಡಿ ಸರ್ಕಾರಿ ಸೇವೆ ದೊರೆಯಬೇಕು ಎಂಬ ಆಲೋಚನೆಯಿಂದ ವಿಧಾನಸೌಧದ ಪಕ್ಕದಲ್ಲೇ ವಿಕಾಸಸೌಧ, ಅದರ ಸನಿಹದಲ್ಲೇ ಉದ್ಯೋಗಸೌಧ ನಿರ್ಮಿಸಲು ಅಡಿಗಲ್ಲು ಹಾಕಿದರು. ಆದರೆ, ವಿಕಾಸಸೌಧ ಪೂರ್ಣಗೊಳ್ಳುವಷ್ಟರಲ್ಲಿ ಎಸ್ಎಂಕೆ ಅವರು ಅಧಿಕಾರದಿಂದ ಕೆಳಗಿಳಿದಿದ್ದರು. ಆ ನಂತರ ಸಿಎಂ ಆದ ಹೆಚ್.ಡಿ.ಕುಮಾರಸ್ವಾಮಿ ಅವರು ವಿಕಾಸಸೌಧ ಉದ್ಘಾಟಿಸಿದರು. ರೈತರ ಜಮೀನಿಗಾಗಿ ಭೂಮಿ ಆ್ಯಪ್ ತಂದರು. ಜೊತೆಗೆ ಬಿಡಿಎ ಮೂಲಕ ಹೊಸ ಬಡಾವಣೆಗಳನ್ನು ನಿರ್ಮಿಸಿ ಲಕ್ಷಾಂತರ ನಿವೇಶನಗಳನ್ನು ಹಂಚಿಕೆ ಮಾಡಿದರು.
ಆಡಳಿತವನ್ನು ಮದ್ಯದ ದೊರೆಗಳಿಂದ ಮುಕ್ತಗೊಳಿಸಲು ಪಾನೀಯ ನಿಗಮ ಸ್ಥಾಪಿಸಿ, ಸೆಕೆಂಡ್ಸ್ ಹಾವಳಿ ತಡೆಗಟ್ಟಿ ಪಾನಪ್ರಿಯರಿಗೆ ಕಡಿಮೆ ದರದಲ್ಲಿ ಮದ್ಯ ದೊರೆಯುವಂತೆ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೂ ಹಣ ಹರಿದು ಬರುವಂತೆ ಮಾಡಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ.
ಎಸ್.ಎಂ.ಕೃಷ್ಣ ಅವರ ಕೃತಿಗಳು : ಎಸ್.ಎಂ.ಕೃಷ್ಣ ಅವರ ಜೀವನಚರಿತ್ರೆ ಚಿತ್ರ ದೀಪ ಸಾಲು, ನೆನಪುಗಳ ಸಂಕಲನ ಸತಿವಾಹಿನಿ, ಜೀವನಚರಿತ್ರೆ ಕೃಷ್ಣಪಥ, ಇಂಗ್ಲಿಷ್ ಕೃತಿಗಳಾದ ಡೌನ್ ಮೆಮೊರಿ ಲೇನ್ ಹಾಗೂ ಸ್ಟೇಟ್ಸಮನ್ ಈ ಕೃತಿಗಳು ನಾಲ್ಕು ವರ್ಷದ ಹಿಂದೆ ಬಿಡುಗಡೆಯಾಗಿವೆ.