ಬೆಂಗಳೂರು: ಗ್ರಾಮಾಂತರ ಜಿಲ್ಲಾ ಪೊಲೀಸ್ ಎಸ್ಪಿ ಕಚೇರಿ ಆವರಣವನ್ನು ಅತಿಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸುತ್ತಿದ್ದ 6 ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಎಂ.ಡಿ.ಹನೀಫ್, ರಾಜಶೇಖರ್, ಉಲ್ಲಾಳದ ಮೊಹಮ್ಮದ್ ನದೀಂ, ಸಂಜಯನಗರದ ಮೋಹನ್ ಶೆಟ್ಟಿ, ಗಣಪತಿ ಹಾಗೂ ಜಹೀರ್ ಅಹಮದ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಜೂನ್ 3ರಂದು ಮಧ್ಯಾಹ್ನ ಮಿಲ್ಲರ್ಸ್ ರಸ್ತೆಯಲ್ಲಿರುವ ಕೇಂದ್ರ ವಲಯ ಐಜಿಪಿ ಕಚೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಕಚೇರಿಯ ಆವರಣದೊಳಗೆ ಅತಿಕ್ರಮವಾಗಿ ಪ್ರವೇಶಿಸಿದ್ದ ಆರೋಪಿಗಳು, ವಿಡಿಯೋ ಚಿತ್ರೀಕರಿಸುತ್ತಿದ್ದರು. ಇದನ್ನು ಗಮನಿಸಿ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ ಪ್ರಶ್ನಿಸಿದ್ದರು. ಈ ವೇಳೆ ಆರೋಪಿಗಳು, "ಈ ಸ್ವತ್ತಿನ ದಾಖಲಾತಿಗಳು ನಮ್ಮ ಬಳಿ ಇವೆ. ನಾವು ಚಿತ್ರೀಕರಣ ಮಾಡುತ್ತೇವೆ. ನಮ್ಮನ್ನು ಕೇಳಲು ನೀನು ಯಾರು?" ಎಂದಿದ್ದರು.
ಸಿಬ್ಬಂದಿ ಎಚ್ಚರಿಕೆ ನೀಡಿದ ಬಳಿಕವೂ ಆರೋಪಿಗಳು ಚಿತ್ರೀಕರಣ ಮುಂದುವರೆಸಿದಾಗ ಆರೋಪಿಗಳನ್ನು ಕಚೇರಿಯೊಳಗೆ ಕರೆದೊಯ್ದ ಸಂತೋಷ್ ಗೌಡ ಮತ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, "ಈ ಸ್ವತ್ತಿನ ಮಾಲೀಕರಾದ ಗಣಪತಿ ಮತ್ತು ಜಹೀರ್ ಎಂಬವರು ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ" ಎಂದು ತಿಳಿಸಿದ್ದರು. ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಸಂತೋಷ್ ಗೌಡ, ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಎಫ್ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: ಐಜಿಪಿ ಕಚೇರಿ ಜಾಗದ ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಆರೋಪ; 6 ಮಂದಿ ವಿರುದ್ಧ ಎಫ್ಐಆರ್ - Allegedly Selling Igp Office