ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಂತ್ರಸ್ತೆಯರ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲ, ತಮ್ಮ ಬಳಿ ಇಟ್ಟುಕೊಳ್ಳುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ), ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ ಅಶ್ಲೀಲ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ವ್ಯಕ್ತಿಗಳನ್ನು ಆ ಸಂದೇಶದ ರಚನಾಕಾರರು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾರಾದರೂ ತಮ್ಮ ಬಳಿ ಅಶ್ಲೀಲ ವಿಡಿಯೋ, ಫೋಟೋ ಹಾಗೂ ಧ್ವನಿ ರೂಪದಲ್ಲಿರುವ ಮುದ್ರಣಗಳನ್ನು ಹಂಚಿಕೊಳ್ಳುವುದಷ್ಟೇ ಅಲ್ಲದೇ, ತಮ್ಮ ಬಳಿ ಇಟ್ಟುಕೊಂಡಿದ್ದರೂ ಅದು ಅಪರಾಧವಾಗಿದೆ ಎಂದು ಎಸ್ಐಟಿ ತಿಳಿಸಿದೆ.
ಆದ್ದರಿಂದ ಯಾರಾದರೂ ಅಂಥವುಗಳನ್ನ ಮೊಬೈಲ್ ಅಥವಾ ಇತರ ಸಾಧನಗಳಲ್ಲಿ ಹೊಂದಿದ್ದರೆ ಡಿಲೀಟ್ ಮಾಡುವುದರಿಂದ ಕಾನೂನಿನ ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರಲಿದೆ ಎಂದು ವಿಶೇಷ ತನಿಖಾ ತಂಡ ಎಚ್ಚರಿಕೆ ನೀಡಿದೆ.
ವಿಡಿಯೋ ಶೇರ್ ಮಾಡಿದರೂ ಕಾನೂನು ಕ್ರಮ: ಪ್ರಕರಣ ಸಂಬಂಧ ಈಗಾಗಲೇ ಎಚ್ಚರಿಕೆ ನೀಡಿರುವ ಎಸ್ಐಟಿ, ಹಾಸನ ಪೆನ್ ಡ್ರೈವ್ ಅಶ್ಲೀಲ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಅಥವಾ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.
ಅಶ್ಲೀಲ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವುದರಿಂದ ಸಂತ್ರಸ್ತೆಯರ ಘನತೆ ಹಾಗೂ ಗೌರವಕ್ಕೆ ಚ್ಯುತಿಯಾಗುತ್ತಿದೆ. ಉದ್ದೇಶಪೂರ್ವವಾಗಿ ವಿಡಿಯೋ ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69 (ಎ) ಹಾಗೂ 228 (ಎ) 1, 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐಟಿ ಎಚ್ಚರಿಸಿದೆ.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣ: ಸಂತ್ರಸ್ತೆಯರ ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ - Hassan Pen Drive Case