ಬೆಂಗಳೂರು: ಆತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಸನಗುಡಿಯಲ್ಲಿರುವ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹೊಳೆನರಸೀಪುರದ ನಿವಾಸಕ್ಕೆ ಪಂಚನಾಮೆ ಕರೆದೊಯ್ದಿದ್ದ ಅಧಿಕಾರಿಗಳು, ಇದೀಗ ಬಸನವನಗುಡಿಯ ನಿವಾಸಕ್ಕೆ ಕರೆದೊಯ್ದು ಮಹಜರು ಮಾಡುತ್ತಿದ್ದಾರೆ.
ಹೊಳೆನರಸಿಪುರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಕೆಲ ತಿಂಗಳ ಕಾಲ ಬೆಂಗಳೂರು ನಿವಾಸದಲ್ಲಿ ಕೆಲಸ ಮಾಡುವಾಗ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಎಸ್ಐಟಿ ಮುಂದೆ ನೊಂದ ಮಹಿಳೆ ಹೇಳಿಕೆ ನೀಡಿದ್ದಳು. ಈ ಹೇಳಿಕೆ ಆಧರಿಸಿ ಇಂದು ಪ್ರಜ್ವಲ್ ರೇವಣ್ಣನನ್ನ ಅಧಿಕಾರಿಗಳು ಮಹಜರಿಗೆ ಒಳಪಡಿಸಿದ್ದಾರೆ. ಇಂದು ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸ್ ಕಸ್ಟಡಿ ಪಡೆಯುವುದು ಬಹುತೇಕ ಅನುಮಾನವಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ನಿರೀಕ್ಷಣಾ ಜಾಮೀನು ಪಡೆದು ಎಸ್ಐಟಿ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದ ಭವಾನಿ ರೇವಣ್ಣ, ಪ್ರಜ್ವಲ್ ಮಹಜರಿಗೆ ಒಳಪಡಿಸುವಾಗ ಮನೆಯ ಮೊದಲ ಮಹಡಿಯಲ್ಲಿ ತುಳಸಿ ಪೂಜೆ ಮಾಡುತ್ತಿರುವುದು ಕಂಡು ಬಂತು.
ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾದ ಮೂಲ ಮೊಬೈಲ್‌ಗಾಗಿ ಎಸ್‌ಐಟಿ ಹುಡುಕಾಟ ಮುಂದುವರಿಸಿದೆ. ಅಲ್ಲದೇ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಆಪ್ತ ವಲಯದವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.
ಇದನ್ನೂ ಓದಿ: ಹೊಳೆನರಸೀಪುರದ ಮನೆಗೆ ಪ್ರಜ್ವಲ್ ರೇವಣ್ಣ ಕರೆತಂದು ಸ್ಥಳ ಮಹಜರು ನಡೆಸಿದ ಎಸ್ಐಟಿ - Prajwal Revanna Case