ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಶ್ಲೀಲ ವಿಡಿಯೊ ಸಂಬಂಧ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ತಂಡವು ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.
ಜರ್ಮನಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿದ ತಂಡವು ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ಲುಕ್ ಔಟ್ ನೊಟೀಸ್ ರವಾನಿಸಲಾಗಿದ್ದು, ದೇಶಕ್ಕೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯುವ ಕೆಲಸವಾಗಲಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ಸಾಧ್ಯತೆ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ವಿಚಾರಣೆಗೆ ಹಾಜರಾಗಬೇಕು ಎಂದು ನಿನ್ನೆ ಐಪಿಸಿ ಸೆಕ್ಷನ್ 41ರ ಅಡಿ ನೊಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ಪ್ರಜ್ವಲ್ ಅವರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಒಂದು ವೇಳೆ ವಿಚಾರಣೆಗೆ ಗೈರು ಹಾಜರಾದರೆ ಅವರನ್ನು ಬಂಧಿಸುವ ಕೆಲಸವನ್ನು ಎಸ್ಐಟಿ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಿನ್ನೆಯಷ್ಟೇ ಓರ್ವ ಸಂತ್ರಸ್ತೆ ಎಸ್ಐಟಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: 'ಸತ್ಯ ಆದಷ್ಟು ಬೇಗ ಹೊರಬರಲಿದೆ': ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೇಳಿದ ಪ್ರಜ್ವಲ್ ರೇವಣ್ಣ - Prajwal Revanna