ಬೆಂಗಳೂರು: ಸಿಎ ನಿವೇಶನ ಹಂಚಿಕೆ ವಿವಾದ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್, ಕೆಐಎಡಿಬಿ ಸಿಎ ನಿವೇಶನವನ್ನು ವಾಪಸ್ ಮಾಡಲು ನಿರ್ಧರಿಸಿದೆ.
ಮುಡಾ ಪ್ರಕರಣ ಸಂಬಂಧ ಸಿಎಂ ಪತ್ನಿ ಪಾರ್ವತಿ 14 ನಿವೇಶನಗಳನ್ನು ವಾಪಸ್ ಮಾಡಲು ತೀರ್ಮಾನ ಕೈಗೊಂಡಿದ್ದರು. ಇದೀಗ ಅದೇ ರೀತಿ ಬೆಂಗಳೂರಿನ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್‌ನಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮಂಜೂರು ಮಾಡಿರುವ 5 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ವಾಪಸ್ ಮಾಡಲು ಮುಂದಾಗಿದೆ.
ನಿಯಮ ಉಲ್ಲಂಘಿಸಿ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ನೀಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿತ್ತು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಲಾಗಿತ್ತು. ರಾಜ್ಯಪಾಲರು ಈ ಸಂಬಂಧ ವಿವರಣೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆಯುವುದನ್ನು ಮನಗಂಡ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್, ಇದೀಗ ಕೆಐಎಡಿಬಿ ಸಿಎ ನಿವೇಶನವನ್ನು ವಾಪಸ್ ಮಾಡಲು ತೀರ್ಮಾನಿಸಿದೆ.
ಸಿದ್ದಾರ್ಥ ವಿಹಾರ್ ಟ್ರಸ್ಟ್ನ ಟ್ರಸ್ಟಿ ರಾಹುಲ್ ಖರ್ಗೆ 5 ಎಕರೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯುವುದಾಗಿ ಕೆಐಎಡಿಬಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಒಟ್ಟು 25 ಕೋಟಿ ಹೂಡಿಕೆ ಮಾಡಲಿದ್ದು, 150 ಮಂದಿಗೆ ಉದ್ಯೋಗ ನೀಡಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಆದರೆ, ಪ್ರಸ್ತಾವನೆಯಲ್ಲಿ ಪ್ಯಾನ್ ಕಾರ್ಡ್ ಸಲ್ಲಿಸಿರಲಿಲ್ಲ. ಇದನ್ನು ಪರಿಗಣಿಸಬಹುದು ಎಂದು ಕೈಗಾರಿಕಾ ಸಚಿವ ಎ.ಬಿ.ಪಾಟೀಲ್ ಅಧ್ಯಕ್ಷತೆಯ ಏಕಗವಾಕ್ಷಿ ಸಮಿತಿ ಸಭೆ ಶಿಫಾರಸು ಮಾಡಿತ್ತು.
ನಿಯಮ ಉಲ್ಲಂಘನೆಯಾದರೂ ಪ್ರಭಾವ ಬಳಸಿ ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಜೊತೆಗೆ ಆರ್ಟಿಐ ಕಾರ್ಯಕರ್ತ ಗಿರೀಶ್ ಕಲ್ಲಹಳ್ಳಿ ಅವರೂ ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ, ನಿಯಮ ಉಲ್ಲಂಘನೆ ಆರೋಪಿಸಿ ಇ.ಡಿ., ಲೋಕಾಯುಕ್ತ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದರು.
ಈ ಸಂಬಂಧ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ''ವೈಯಕ್ತಿಕವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ. ಹೀಗಾಗಿ, ಸಿಎ ಸೈಟ್ ಬೇಡ ಎಂದು ಟ್ರಸ್ಟಿ ರಾಹುಲ್ ಖರ್ಗೆ ಸೆ.20ರಂದು ಪತ್ರ ಬರೆದಿದ್ದಾರೆ. ಸಿಎ ಸೈಟ್ ಪಡೆಯುವುದಕ್ಕೆ ನಾವು ಅರ್ಹರಿದ್ದೇವೆ, ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎರಡು, ಮೂರು ಕಾರಣ ಕೊಟ್ಟು ಸೈಟ್ ಮರಳಿ ನೀಡಿದ್ದಾರೆ. ಖಾಸಗಿ ಟ್ರಸ್ಟ್ ಅಲ್ಲ ಪಬ್ಲಿಕ್ ಟ್ರಸ್ಟ್ ಎಂದು ನಮೂದಿಸಿದ್ದಾರೆ. ಟ್ರಸ್ಟ್‌ಗೆ ಬಂದ ಹಣ ಯಾವುದೇ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎ ಸೈಟ್ನಲ್ಲಿ ಯಾವುದೇ ರೀತಿ ರಿಯಾಯಿತಿ ಕೊಡುವುದಕ್ಕೆ ಬರುವುದಿಲ್ಲ. ಇದು ತರಬೇತಿಗೆ ಅಂತ ಸಿಎ ಸೈಟ್ ಇತ್ತು, ಆದರೆ ಯಾವುದೇ ಲಾಭದ ಉದ್ದೇಶ ಇರಲಿಲ್ಲ. ಆದರೆ ಬಿಜೆಪಿಯವರು ಹಲವು ರೀತಿಯ ಆರೋಪ ಮಾಡಿದರು'' ಎಂದರು.
ದಾಖಲೆ ಆಧಾರದ ಮೇಲೆ ಸೈಟ್ ಸಿಕ್ಕಿದೆ: ''ತರಾತುರಿಯಲ್ಲಿ ಹಾಗೂ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪ ಇತ್ತು. ಆದರೆ ಇಲ್ಲಿ ಹಾಗೆ ಆಗಿಲ್ಲ. ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ ಅನ್ಸುತ್ತೆ. ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ಸಿಕ್ಕಿದೆ. ಯುಪಿಎಸ್ಸಿನಲ್ಲೂ ರ‍್ಯಾಂಕ್ ಬಂದಿದ್ದರು. ಆದರೆ, ಈ ವಿಚಾರದಲ್ಲಿ ಅವರಿಗೆ ಹೆಚ್ಚು ಮಾಹಿತಿ ಇರಲಿಲ್ಲ ಅನ್ಸುತ್ತೆ. ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ. ಯುರೋ ಸ್ಪೇಸ್ನಲ್ಲಿ ಜಾಗ ಬೇಕು ಅಂತ ಅರ್ಜಿ ಹಾಕುತ್ತಾರೆ. ಅದರ ಅನ್ವಯ ಅವರಿಗೆ ಸೈಟ್ ಅಲಾಟ್ ಆಗಿದೆ. ಸಂಪೂರ್ಣ ದಾಖಲೆ ಆಧಾರದ ಮೇಲೆ ಸೈಟ್ ಸಿಕ್ಕಿದೆ'' ಎಂದು ತಿಳಿಸಿದರು.
''ನಮ್ಮ ಅಣ್ಣ ಅವರು ಮೃದು ಸ್ವಭಾವದವರು. ಅವರಿಂದ ಕುಟುಂಬದ ಸದಸ್ಯರರಿಗೆ ಹಿಂಸೆ ಆಗುತ್ತಿದೆ ಎಂದು ನೊಂದಿದ್ದಾರೆ. ಸೆಪ್ಟೆಂಬರ್ 20ರಂದು ಅವರು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ನಿವೇಶನ ಕಾನೂನಾತ್ಮಕವಾಗಿ ಮರಳಿ ನೀಡುತ್ತಿದ್ದೇವೆ ಎಂದಿರುವ ಅವರು, ಕೆಐಎಡಿಬಿಗೆ ಧನ್ಯವಾದ ಸಲ್ಲಿಸಿ ಸಿಎ ಸೈಟ್ ಮರಳಿ ನೀಡಿದ್ದಾರೆ. ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳುತ್ತಾ ಹೊರಟಿದ್ದರು. ಆದರೆ, ರಾಜಕೀಯ ಅರೋಪದಿಂದ ನೊಂದು ಸಿಎ ಸೈಟ್ ವಾಪಸ್ ನೀಡಿದ್ದಾರೆ'' ಎಂದರು.
''ರಾಹುಲ್ ಖರ್ಗೆ ಅವರಿಗೆ ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಆಗಲ್ಲ ಎಂದು ಮರಳಿ ನೀಡಿದ್ದಾರೆ. ಇದರಲ್ಲಿ ಅಕ್ರಮ ಇದ್ದಿದ್ದರೆ, ಮೋದಿ, ಅಮಿತ್ ಶಾ ಬಿಡುತ್ತಿದ್ದರಾ?. ವಿಜಯೇಂದ್ರ ಅವರು ಕಲಬುರಗಿಯವರೆಗೆ ಪಾದಯಾತ್ರೆ ಮಾಡುತ್ತಿದ್ದರು. ಇಲ್ಲಿ ಸಮಸ್ಯೆ ಅಂದರೆ, ನಾವು ಸಿಎ ಸೈಟ್ ಪಡೆಯಬಾರದು ಎಂಬುದು. ಖರ್ಗೆ ಕುಟುಂಬದವರು ಸೈಟ್ ತೆಗೆದುಕೊಳ್ಳಬಾರದು ಅನ್ನೋದು ಅಷ್ಟೇ. ಛಲವಾದಿ ನಾರಾಯಣಸ್ವಾಮಿ ಬಿರಿಯಾನಿ ಶಾಪ್ ಮಾಡೋದಕ್ಕೆ ಸಿಎ ಸೈಟ್ ಪಡೆದಿದ್ದರು ಅಲ್ವಾ?'' ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
''ಸಿಎ ಸೈಟ್ ತೆಗೆದುಕೊಳ್ಳುವ ಬಗ್ಗೆ ರಾಹುಲ್ ಖರ್ಗೆ ನಿರ್ಧಾರ ಮಾಡಿದ್ದರು. ಈಗ ಅವರೇ ಇಷ್ಟವಿಲ್ಲ ಅಂತ ಮರಳಿ ನೀಡಿದ್ದಾರೆ. ರಾಹುಲ್ ಖರ್ಗೆ ಯಾರು ಅಂತ ಯಾರಿಗೂ ಗೊತ್ತಿಲ್ಲ. ಕಷ್ಟಪಟ್ಟು ರಾಹುಲ್ ಖರ್ಗೆ ಯುಪಿಎಸ್ಸಿ ಪಾಸ್ ಆಗಿದ್ದಾರೆ. ಕಷ್ಟಪಟ್ಟು ನಮ್ಮ ಕುಟುಂಬದಲ್ಲಿ ರಾಹುಲ್ ಖರ್ಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇದೊಂದು ರಾಜಕೀಯ ಆರೋಪ ಅಷ್ಟೇ. ಆದರೆ, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿಯವರು ಮನು ಸ್ಮೃತಿ ಸಭಾವದವರು. ಬಿಜೆಪಿ ನಾಯಕರ ಮಕ್ಕಳನ್ನ ಆರ್ಎಸ್ಎಸ್ಗೆ ಕಳಿಸುವುದಿಲ್ಲ. ನಮಗೆ ಸದಾಕಾಲ ವೈಯಕ್ತಿಕವಾಗಿ ದಾಳಿ ಮಾಡುತ್ತಾರೆ. ಚುಚ್ಚು ಮಾತುಗಳ ಮೂಲಕ ತೇಜೋವಧೆ ಮಾಡುತ್ತಾರೆ'' ಎಂದು ಟೀಕಿಸಿದರು.
ಇದನ್ನೂ ಓದಿ: 'ಸತೀಶ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ': ಬೆಳಗಾವಿಯಲ್ಲಿ ಕರವೇ ಬ್ಯಾನರ್