ಮೈಸೂರು: ಹೆಚ್.ಡಿ. ಕೋಟೆ ಬಳಿಯ ಕಬಿನಿ ಹಿನ್ನೀರಿನ ಸಮೀಪದಲ್ಲಿರುವ ಆರೆಂಜ್ ಕೌಂಟಿ ಖಾಸಗಿ ರೆಸಾರ್ಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದಿನವಿಡೀ ವಿಶ್ರಾಂತಿ ಪಡೆದಿದ್ದು, ಕೆಲವು ಆಪ್ತ ನಾಯಕರೊಂದಿಗೆ ಚುನಾವಣೆ ಗೆಲ್ಲುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ರೆಸಾರ್ಟ್ನಲ್ಲಿ ಕಳೆದ ಭಾನುವಾರದಿಂದ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕೊಠಡಿಯಿಂದ ಹೊರಗೆ ಬಾರದೇ ಯಾವುದೇ ಸಫಾರಿ, ಬೋಟಿಂಗ್ಗೆ ತೆರಳದೆ ರೆಸಾರ್ಟ್ನಲ್ಲೇ ಸಂಪೂರ್ಣ ವಿಶ್ರಾಂತಿ ಪಡೆದಿದ್ದಾರೆ. ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರು ರೆಸಾರ್ಟ್ಗೆ ಬರದಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಸಿಎಂ ಆಪ್ತ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ವೆಂಕಟೇಶ್, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಹಾಗೂ ಹೆಚ್.ಡಿ. ಕೋಟೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಮಾತ್ರ ಸಿಎಂ ಜೊತೆ ರೆಸಾರ್ಟ್ನಲ್ಲಿದ್ದು, ಲೋಕಸಭಾ ಚುನಾವಣೆಯನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಬುಧವಾರ ಬೆಳಗ್ಗೆ ರೆಸಾರ್ಟ್ನಲ್ಲಿ ತಿಂಡಿ ಮುಗಿಸಿ ಮೈಸೂರಿಗೆ ಆಗಮಿಸಲಿರುವ ಸಿಎಂ 11 ಗಂಟೆಗೆ ಮೈಸೂರಿನ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರು, ಕಾಂಗ್ರೆಸ್ಗೆ ಸೇರ್ಪೆಡೆಯಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ರಾಜ್ಯಾದ್ಯಂತ ಪ್ರವಾಸಕ್ಕೆ ಸಿಎಂ ಪ್ಲಾನ್: ರಾಜ್ಯದಲ್ಲಿ 2 ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಸಂಬಂಧ ರೆಸಾರ್ಟ್ನಿಂದ ಕೆಲವು ಉತ್ತರ ಕರ್ನಾಟಕದ ಮುಖಂಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಪ್ರಚಾರಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಸಿಎಂ ಅಧಿಕಾರಿಗಳಿಗೆ ರೆಸಾರ್ಟ್ನಿಂದಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಹಳೇ ಮೈಸೂರು ಭಾಗದ ಮೈಸೂರು-ಕೊಡಗು, ಚಾಮರಾಜನಗರ, ಹಾಸನ, ಮಂಡ್ಯ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಿಎಂ ಮೊದಲ ಹಂತದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಕ್ಷೇತ್ರಗಳಲ್ಲಿ ಗೆಲ್ಲಲು ಚುನಾವಣಾ ತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ಕೆಲವು ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ.
ಇದನ್ನೂ ಓದಿ: ಕಬಿನಿ ಹಿನ್ನೀರಿನ ರೆಸಾರ್ಟ್ನಲ್ಲಿ ಸಿಎಂ ಮೂರು ದಿನ ವಾಸ್ತವ್ಯ: ಚುನಾವಣೆ ಗೆಲ್ಲಲು ಕಾರ್ಯತಂತ್ರ - CM Siddaramaiah