ಚಿಕ್ಕಮಗಳೂರು : ಖಾಸಗಿ ಕಾರ್ಯಕ್ರಮದ ನಿಮಿತ್ತ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಿಕ್ಕಮಗಳೂರು ಜಿಲ್ಲೆಗೆ ಇಂದು ಭೇಟಿ ನೀಡಿದ್ದು, ಇದೇ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪತ್ರ ಚಳವಳಿ ಹಾಗೂ ಗೋ ಬ್ಯಾಕ್ ಅಭಿಯಾನ ನಡೆಯುತ್ತಿರುವ ಪ್ರತಿಕ್ರಿಯೆ ನೀಡಿರುವ ಬಿ ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಕಳೆದ ಬಾರಿ 3.50 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಅದೇ ಅಂತರ ಅಥವಾ ಅದಕ್ಕೂ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮೋದಿಯಿಂದಾಗಿ ದೇಶ, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ನಾವು 28ಕ್ಕೆ 28 ಗೆಲ್ಲಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ. ಸದ್ಯ ಅದೇ ವಾತಾವರಣವಿದೆ. ಶೋಭಾ ಕರಂದ್ಲಾಜೆ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಯಾರು ಮಾಡಿಸುತ್ತಿದ್ದಾರೆ ಅಂತಾ ಎಲ್ಲರಿಗೂ ಗೊತ್ತು. ಅವರು ಯಾವುದಕ್ಕೂ ಧೃತಿಗೆಡಲ್ಲ. ಕೇಂದ್ರ ಸಚಿವೆಯಾಗಿ ಬಹಳ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಬಿಎಸ್ವೈ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇಂದು ಅಥವಾ ನಾಳೆಗೆ ಗೊತ್ತಾಗುತ್ತೆ. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ವಿಚಾರದ ಬಗ್ಗೆಯೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಮೊದಲ ಪಟ್ಟಿ ಮೂರು ದಿನದಲ್ಲಿ ಬಿಡುಗಡೆ ಆಗಬಹುದು ಅಂದುಕೊಂಡಿದ್ದೇನೆ ಎಂದರು.
ಓದಿ: ದ್ವಾರಕಾದಲ್ಲಿ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ 'ಸುದರ್ಶನ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ