ಬೆಂಗಳೂರು: ಚುನಾವಣೆ ಕಾರಣಕ್ಕಾಗಿ ಸಾಲ ತಂದು ಗ್ಯಾರಂಟಿ ಯೋಜನೆಗೆ ವಿನಿಯೋಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಕೇವಲ ಲೋಕಸಭಾ ಚುನಾವಣೆವರೆಗೆ ಮಾತ್ರ ಇರಲಿವೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆರೋಪಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಚುನಾವಣೆ ಮಾಧ್ಯಮ ಕೇಂದ್ರದಲ್ಲಿ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆಯ ಎಷ್ಟು ಬಸ್ ಓಡ್ತಿವೆ? ಅವುಗಳಲ್ಲಿರುವ ಸಾಮಾನ್ಯ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಲಾಗುತ್ತಿದೆ. ಆದರೆ ಈ ಬಸ್ ಓಡಿಸಲು, ಡೀಸೆಲ್ ಹಾಕಿಸಲು ಹಾಗೂ ಸಂಬಳ ಕೊಡಲು ದುಡ್ಡು ಎಲ್ಲಿಂದ ತಂದ್ರಿ? ಸಾಲ ತಂದು ಬಸ್ ನಡೆಸುತ್ತಿದ್ದಾರೆ ಎಂದರು.
ಸಾಲ ತಂದು ಗ್ಯಾರಂಟಿಗೆ ಬಳಕೆ: ಮಹಿಳೆಯರಿಗೆ ಉಚಿತ ಅಂತಾರೆ, ಆದರೆ ಇದು ಬರೀ ಲೋಕಸಭಾ ಎಲೆಕ್ಷನ್‌ವರೆಗೂ ಮಾತ್ರ. ಸಿದ್ದರಾಮಯ್ಯ ಒಂದು ವರ್ಷದಲ್ಲಿ ಲಕ್ಷಾಂತರ ರೂಪಾಯಿ ಸಾಲ ತಂದು ಗ್ಯಾರಂಟಿಗೆ ಕೊಡ್ತಿದ್ದಾರೆ. ಬಸ್ ನಡೆಸಲು ಸಾಲ ಯಾಕೆ ತರ್ತಿರಾ? ಬಳಿಕ ಮೊಸಳೆ ಕಣ್ಣೀರು ಸುರಿಸುತ್ತಿರಾ? ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಕರ್ನಾಟಕದಲ್ಲೂ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಗೆ ಮಹಿಳೆಯರ ಬಗ್ಗೆ ಗೌರವ ಇದೆ: ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಇಲ್ಲಿ ಆ ರೀತಿಯ ತಪ್ಪು ಅರ್ಥ ಮಾಡಿಕೊಳ್ಳಬೇಡಿ ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವ ಇದೆ. ಅವರ ಹೇಳಿಕೆಯನ್ನು ತಿರುಚಿ ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ತಿರುಚಿ ಹೇಳಿಕೆ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿರುವುದು ಬಹಳ ಸ್ಪಷ್ಟವಿದೆ. ಈ ಚುನಾವಣೆಗೆ ಮೈತ್ರಿ ವಿರುದ್ಧ ಒಂದು ವಿಷಯ ಸಿಕ್ಕಬೇಕು. ಯಾವುದೇ ವಿಚಾರ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಕುಮಾರಸ್ವಾಮಿ ಹೇಳಿಕೆಯನ್ನು ತಿರುಗಿ ಮುರುಗಿ ಮಾಡಿ ಕೇಳಿಕೆ ಕೊಡುವ ಕೆಲಸ ಮಾಡಿದೆ. ನೂರು ಸುಳ್ಳ ಹೇಳಿ ಸತ್ಯ ಮಾಡುವ ಚಾಳಿ ಕಾಂಗ್ರೆಸ್ ನದ್ದು, ಕಾಂಗ್ರೆಸ್ನ ಅದೇ ಕೆಲಸವಾಗಿದೆ ಎಂದು ಟೀಕಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ ಎಂಬ ಆರೋಪವನ್ನು ಶೋಭ ಕರಂದ್ಲಾಜೆ ತಳ್ಳಿಹಾಕಿದರು. ಎಲ್ಲ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ಯಾವುದೇ ಜಾತಿ ಇಲ್ಲ. ಯಾವುದೇ ಧರ್ಮ ಇಲ್ಲ. ಪದೇ ಪದೆ ಒಕ್ಕಲಿಗ ಕ್ಯಾಂಡಿಡೇಟ್, ಲಿಂಗಾಯತ ಕ್ಯಾಂಡಿಡೇಟ್ ಅಂತ ಚರ್ಚೆ ಆಗುತ್ತಿದೆ. ನಮ್ಮ ನಾಯಕರು ಹೇಳಿದ ಹಾಗೆ, ಬಡವರು , ಮಹಿಳೆಯರು, ರೈತರು ಯುವಕರು ನಾಲ್ಕು ಜಾತಿ ನಮಗೆ ಮುಖ್ಯ, ಯಡಿಯೂರಪ್ಪ ಅವರೇ ನಮ್ಮ ಕ್ಷೇತ್ರಕ್ಕೆ ಬಂದಿಲ್ವಾ? ಅವರು ಲಿಂಗಾಯತ ನಾಯಕರಲ್ವಾ? ಅವರನ್ನು ಮುಖ್ಯವಾಗಿ ರೈತ ನಾಯಕರು ಅಂತಾರೆ ಜಾತಿ ಆಧಾರದ ಮೇಲೆ ನಾವು ವೋಟ್ ಕೇಳಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.