ದಾವಣಗೆರೆ: ಈ ದೇಶದ ಕೀಲಿ ಕೈಯನ್ನು ಯಾರ ಕೈಯಲ್ಲಿ ಕೊಡಬೇಕು? ಪ್ರಧಾನಿ ಮೋದಿಗೆ ಎದುರಾಳಿ ಯಾರು? ಎಂದು ಮತದಾರರಲ್ಲಿ ಪ್ರಶ್ನಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೋದಿಗೆ ಯಾರೂ ಎದುರಾಳಿ ಇಲ್ಲ ಎಂದು ಹೇಳಿದರು.
ಮೋದಿಗೆ ಎದುರಾಳಿಯೇ ಇಲ್ಲ: ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿಯಲ್ಲಿ ಗಾಯಿತ್ರಿ ಸಿದ್ದೇಶ್ವರ್ ಪರ ಚುನಾವಣಾ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಅವರಿಗೆ ಎದುರಾಳಿ ರಾಹುಲ್ ಗಾಂಧಿ ಆಗ್ತಾರಾ? ಸಿದ್ದರಾಮಯ್ಯ, ಮಮತಾ ಬ್ಯಾನರ್ಜಿ, ಸ್ಟಾಲಿನ್ ಆಗ್ತಾರಾ? ಯಾರು ಎದುರಾಳಿ ಆಗ್ತಾರೆ ಎಂದು ನಮಗೂ ಗೊತ್ತಿಲ್ಲ. ಅವರಿಗೆ ಎದುರಾಳಿಯೇ ಇಲ್ಲ ಎಂದು ತಿಳಿಸಿದರು.
ಮೋದಿ ಮಹಾನ್ ನಾಯಕ: ಮೋದಿ ಅವರು ಕಿಸಾನ್ ಸಮ್ಮಾನ್ ರೀತಿಯ ಸಾಕಷ್ಟು ಯೋಜನೆಗಳನ್ನು ಕೊಟ್ಟಂತ ಮಹಾನ್ ನಾಯಕ. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್, ಶೌಚಾಲಯ, ಆಯುಷ್ಮಾನ್ ಕಾರ್ಡ್, ಜನೌಷಧಿ ಕೇಂದ್ರ ಸೌಲಭ್ಯಗಳನ್ನು ಕೊಟ್ಟಿದ್ದು ಮೋದಿ. ರೈಲ್ವೆಯನ್ನು ಕೆಲವರು ಗಬ್ಬು, ಜಿರಳೆ ಎಂದು ಹಂಗಿಸುವ ಪರಿಸ್ಥಿತಿಯಿತ್ತು. ರೈಲ್ವೆಯನ್ನು ಉನ್ನತೀಕರಿಸಿದ್ದು, ಹೆದ್ದಾರಿಯನ್ನು ಅಭಿವೃದ್ಧಿಪಡಿಸಿದ್ದು ನಮ್ಮ ನಾಯಕ ಮೋದಿ. 65 ವರ್ಷಗಳಲ್ಲಿ ನಮ್ಮ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ನಾವು ಹತ್ತು ವರ್ಷಗಳಲ್ಲಿ 74 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆವು ಎಂದು ಪಕ್ಷದ ಪರ ಪ್ರಚಾರ ಮಾಡಿದರು.
ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್ಐಆರ್ - Female Foeticide case
ಸೈನಿಕರಿಗೆ ಬಂದೂಕು ಚಲಾಯಿಸಲು ಅಧಿಕಾರ ಕೊಟ್ಟಿದ್ದು ಮೋದಿ: ನಮ್ಮ ದೇಶದ ಗಡಿಯನ್ನು ಅದೆಷ್ಟೋ ತಾಯಂದಿರ ಮಕ್ಕಳು ಕಾಯುತ್ತಿದ್ದಾರೆ. ಈ ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದಮೇಲೆ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ಸಿಕ್ಕಿದೆ. ಗಟ್ಟಿತನ ಬಂದಿದೆ. ನಮ್ಮ ಸೈನಿಕರ, ಪೊಲೀಸರ ಶಸ್ತ್ರಾಸ್ತ್ರಕ್ಕೆ ಮದ್ದು ಗುಂಡುಗಳು ಹೊರದೇಶದಿಂದ ಬರುತ್ತಿದ್ದವು. ಆಧುನಿಕ ಶಸ್ತ್ರಾಸ್ತ್ರ ಕೊಟ್ಟಿದ್ದು ಮೋದಿ. ಯುಪಿಎ ಸರ್ಕಾರದ ಅವಧಿಯಲ್ಲಿ ಸೈನಿಕರ ಕೈಯಲ್ಲಿ ಬಂದೂಕು ಇರುತಿತ್ತು. ಅದ್ರೆ ಅದನ್ನು ಚಲಾಯಿಸಲು ಹಕ್ಕು ಕೊಟ್ಟಿರಲಿಲ್ಲ. ಭಯೋತ್ಪಾದಕರು ಗುಂಡು ಹಾರಿಸಿದ್ರೆ ಪ್ರತಿದಾಳಿ ಮಾಡಲು ದೆಹಲಿಗೆ ಫೋನ್ ಮಾಡಬೇಕಾಗಿತ್ತು. ಅನುಮತಿ ಸಿಗುವುದೊರಳಗೆ ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಂದು ಪಾಕಿಸ್ತಾನ ಸೇರುತ್ತಿದ್ದರು. ಒಂದು ಗುಂಡಿಗೆ ನಾಲ್ಕೈದು ಗುಂಡು ಹಾರಿಸಿ ಪ್ರತ್ಯುತ್ತರ ಕೊಡಿ ಎಂದು ಸೈನಿಕರಿಗೆ ಅಧಿಕಾರ ಕೊಟ್ಟಿದ್ದು ಮೋದಿ ಎಂದು ತಿಳಿಸಿದರು.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ವಾತವರಣವಿದೆ. ಸಂಸದ ಜಿಎಂ ಸಿದ್ದೇಶ್ವರ್ ಅವರು ಬೇರೆಯವರ ಕಿಸೆಗೆ ಕೈಗೆ ಹಾಕಲಿಲ್ಲ, ಕೇಂದ್ರದಿಂದ ಬಂದ ಅನುದಾನದಿಂದ ದಾವಣಗೆರೆ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಮತಯಾಚನೆ ಮಾಡಿದರು.