ಶಿವಮೊಗ್ಗ: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಸಲಾಗಿದೆ. ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಇದೇ ವೇಳೆ, 1 ಲೀಟರ್, ಅರ್ಧ ಲೀಟರ್ ಹಾಲಿನ ಜೊತೆ 50 ಎಂಎಲ್ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ನಾಳೆ (ಜೂನ್ 26)ಯಿಂದಲೇ ಜಾರಿಗೆ ಬರಲಿದೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಗೋಪಿನಾಥ್ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ರಾಜ್ಯ ಸರ್ಕಾರ ಮತ್ತೊಮ್ಮೆ ಹಾಲಿನ ದರ ಏರಿಕೆ ಮಾಡಿದೆ. ನಾವು ವಾಣಿಜ್ಯ ಬಳಕೆಯ ಅಡುಗೆ ಅನಿಲದ ಜಿಎಸ್ಟಿ ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡೆವು, ಆದರೆ ಅದು ಆಗಲಿಲ್ಲ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಈಗ ಹಾಲಿನ ದರ ಏರಿಕೆಯಾಗಿರುವುದು ಹೋಟೆಲ್ ಉದ್ಯಮಕ್ಕೆ ಹೊಡೆತ ಎಂದು ಭಾವಿಸಬಹುದು" ಎಂದರು.
"ಗ್ರಾಹಕರು ಹಾಲಿನ ದರ ಏರಿಕೆಯ ಬಗ್ಗೆ ಕೇಳಲ್ಲ, ನಾವು ದರ ಏರಿಕೆ ಮಾಡಿದರೆ ಕೇಳುತ್ತಾರೆ. ಹಾಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ವಿನಂತಿ ಮಾಡುತ್ತೇವೆ. ಯಾವುದಾದರೂ ದರ ಕಡಿಮೆ ಮಾಡಬೇಕಿದೆ. ಹೋಟೆಲ್ ಸಿಬ್ಬಂದಿಗೆ ಸಂಬಳ ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೋಟೆಲ್ ಉದ್ಯಮದ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ" ಎಂದು ಹೇಳಿದರು.
ಸ್ಥಳೀಯರಾದ ಅ.ನಾ.ವಿಜಯೇಂದ್ರ ಮಾತನಾಡಿ, "ಸರ್ಕಾರ ಹಾಲಿ ದರ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ನಾವು ಬಡವರಲ್ಲ, ಶ್ರೀಮಂತರೂ ಅಲ್ಲ, ಮಧ್ಯಮ ವರ್ಗದವರಾದ ನಮಗೆ ದರ ಏರಿಕೆಯಿಂದ ಹೊರೆ ಆಗುತ್ತಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ಇದೇ ರೀತಿಯಾದರೆ ಮುಂದೆ ಮಧ್ಯಮ ವರ್ಗದವರು ಬದುಕಲು ಸಾಧ್ಯವಾಗುವುದಿಲ್ಲ. ಸರ್ಕಾರ ಹಾಲಿನ ದರ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ನಾಗರಿಕರ ಒಕ್ಕೂಟದಿಂದ ಪ್ರತಿಭಟನೆ ಮಾಡುತ್ತೇವೆ. ಪ್ರತಿಪಕ್ಷದವರೂ ಸಹ ಪ್ರತಿಭಟನೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ವಿನಂತಿಸಿದರು.
ಮತ್ತೋರ್ವ ಸ್ಥಳೀಯರಾದ ರಾಜ್‌ಕುಮಾರ್ ಮಾತನಾಡಿ, "ಸರ್ಕಾರ ಹಾಲಿ ದರ ಏರಿಕೆ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಹಾಲು ಉತ್ಪಾದನೆ ಹೆಚ್ಚು ಒತ್ತು ನೀಡಬೇಕು. ಸರ್ಕಾರ ಜನಸಾಮಾನ್ಯರ ಸರ್ಕಾರವಾಗಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಪ್ರತಿ ಲೀಟರ್ಗೆ 2 ರೂ. ಹೆಚ್ಚಳ! - MILK PRICE HIKE