ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನವಾಗಿದೆ. ಇವಿಎಂ ಕೈಕೊಟ್ಟಂತಹ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮಂಗಳವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಕ್ಷೇತ್ರದಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲಿ ಶೇ 76.58ರಷ್ಟು ಮತದಾನವಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಶೇ 76.05ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ: ಈ ಸಲದ ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂವರು ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮತಪ್ರಭುವಿನ ಫಲಿತಾಂಶ ಹೊರಬರಲು ಜೂನ್ 4ರವರೆಗೆ ಕಾಯಲೇಬೇಕು.
ಕ್ಷೇತ್ರದಲ್ಲಿ 2,039 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 40 ಸಖಿ ಬೂತ್ಗಳು, 104 ವಲ್ನರಬಲ್ ಹಾಗೂ 325 ಕ್ರಿಟಿಕಲ್ ಮತಗಟ್ಟೆಗಳಿದ್ದವು. ಬೆಳಗ್ಗೆ 7ರಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 6ರ ತನಕ ನಡೆಯಿತು. ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಅಧಿಕಾರಿಗಳು ರಾಜಕೀಯ ಪಕ್ಷಗಳ ಬೂತ್ ಏಜೆಂಟರ ಸಮ್ಮುಖದಲ್ಲಿ ಮತಯಂತ್ರಗಳನ್ನು ಸೀಲ್ ಮಾಡಿ ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋದರು.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಇದ್ದು, ಇಲ್ಲಿ ಕ್ಷೇತ್ರದ ಎಲ್ಲಾ ಮತಯಂತ್ರಗಳನ್ನು ಕ್ಷೇತ್ರವಾರು ತಂದಿಡಲಾಗಿದೆ. ಜೂನ್ 4ರ ತನಕ ಇಲ್ಲಿ ಮತಯಂತ್ರಗಳು ಭದ್ರವಾಗಿರುತ್ತವೆ. ಶಿವಮೊಗ್ಗ, ಹೊಸನಗರ, ಸೊರಬ ಭಾಗದಲ್ಲಿ ಬೆಳಿಗ್ಗೆ ಮತಯಂತ್ರಗಳು ಕೈಕೊಟ್ಟಿದ್ದರಿಂದ ಅರ್ಧಗಂಟೆ ಹೆಚ್ಚಿನ ಮತದಾನಕ್ಕೆ ಅವಕಾಶ ನೀಡಲಾಗಿತ್ತು.
ಬೆಳ್ಳಂಬೆಳಗ್ಗೆಯೇ ರಾಜಕಾರಣಿಗಳು ಮತದಾನ ಮಾಡಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರರಾದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಮ್ಮ ಕುಟುಂಬಸಮೇತ ಸೈನ್ಸ್ ಮೈದಾನದಲ್ಲಿನ ಬೂತ್ಗೆ ಬಂದು ವೋಟ್ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ವಗ್ರಾಮ ಸೊರಬ ತಾಲೂಕಿನ ಕುಬಟೂರು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಸ್ವಗ್ರಾಮ ಬೇಳೂರಿನಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಗರದಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಕುಮಾರ ಬಂಗಾರಪ್ಪ ಕುಬಟೂರಿನಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಹಾಲಪ್ಪ ಹರತಾಳು ಗ್ರಾಮದಲ್ಲಿ ಮತದಾನ ಮಾಡಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಹ ತೀರ್ಥಹಳ್ಳಿಯಲ್ಲಿ ಮತದಾನ ಮಾಡಿದರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಭದ್ರಾವತಿಯಲ್ಲಿ ಮತದಾನ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಿದ್ದರು.
ಮತಗಟ್ಟೆಗಳತ್ತ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಪ್ರತೀ ವರ್ಷದಂತೆ ಈ ವರ್ಷವೂ ವಿವಿಧೆಡೆ ವಿಶೇಷ ಬೂತ್ಗಳನ್ನು ರಚಿಸಿತ್ತು. ನಗರದ ಜಿಲ್ಲಾ ಪಂಚಾಯತ್ ಸಿಇಒ ಕಚೇರಿಯಲ್ಲಿ ರಚನೆ ಮಾಡಲಾಗಿದ್ದ ಅರಮನೆ ಸೆಟ್ ಮಾದರಿಯ ಬೂತ್ ಗಮನ ಸೆಳೆಯಿತು. ಮತದಾರರಿಗಾಗಿ ರೆಡ್ ಕಾರ್ಪೆಟ್ ಹಾಸಲಾಗಿತ್ತು. ಅರಮನೆ ರೀತಿಯ ಕಂಬಗಳನ್ನಿಡಲಾಗಿತ್ತು. ಇಲ್ಲಿನ ಬಿಎಲ್ಒ ಅವರು ರಾಣಿಯ ರೀತಿ ಸಿದ್ಧಗೊಂಡು ಮತದಾರರನ್ನು ಸ್ವಾಗತಿಸಿದರು. ಮತದಾನ ಮಾಡಿ ಹೊರ ಬರುವವರು ಸಿಂಹಾಸನದ ಮೇಲೆ ಕುಳಿತು ಕಿರೀಟ ತೊಟ್ಟು ಫೋಟೋ ತೆಗೆಸಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.