ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿ ಸೋತಿದ್ದರು. ಈಗ ತಮ್ಮ ನೇತೃತ್ವದ ರಾಷ್ಟ್ರಭಕ್ತ ಬಳಗದವರನ್ನು ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಈಶ್ವರಪ್ಪ, "ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಬೇಡಿಕೆ ಬರುತ್ತಿದೆ. ಎಷ್ಟು ವಾರ್ಡ್ನಲ್ಲಿ ಸ್ಪರ್ಧೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಅನೇಕರ ಅಭಿಪ್ರಾಯ 35 ವಾರ್ಡ್ಗೂ ಸ್ಪರ್ಧೆ ಮಾಡಬೇಕೆಂದಿದೆ. ಇನ್ನೊಂದು ಸಲ ಕುಳಿತು ಚರ್ಚೆ ನಡೆಸುತ್ತೇವೆ. ಚುನಾವಣೆಗೆ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆಯೇ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ. ಪಾಲಿಕೆಗೆ ಹೆಚ್ಚಿನ ವಾರ್ಡ್‌ಗಳನ್ನು ಸೇರಿಸಿಕೊಳ್ಳಬೇಕೆಂಬ ಬೇಡಿಕೆಯೂ ಇದೆ" ಎಂದರು.
ತಮ್ಮ ಪುತ್ರ ಕೆ.ಈ.ಕಾಂತೇಶ್ ಮೂಲಕ ಪಾಲಿಕೆಯ 35 ವಾರ್ಡ್ನ ತಮ್ಮ ಆಪ್ತರು ಹಾಗೂ ಕೆಲ ಮುಖಂಡರನ್ನು ಸಂಪರ್ಕಿಸಿ, ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಕೆಲವರನ್ನು ಫೋನ್ ಮೂಲಕ ಸಂಪರ್ಕಿಸಿದರೆ, ಮತ್ತೆ ಕೆಲವರ ಮನೆಗೆ ಹೋಗಿ ಮಾತನಾಡಿಸುತ್ತಿದ್ದಾರೆ.
ನಿಮಗೆ ನಮ್ಮ ರಾಷ್ಟ್ರಭಕ್ತ ಬಳಗದ ವತಿಯಿಂದ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಚುನಾವಣೆಗೆ ಬೇಕಾದ ಎಲ್ಲಾ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಅವರು ಹೇಳುತ್ತಿದ್ದಾರೆ. ಇದಕ್ಕಾಗಿ ಮಳೆಯಿಂದ ಬಿದ್ದ ಮನೆಗಳಿಗೆ ಭೇಟಿ ನೀಡಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಪ್ರತಿ ವಾರ್ಡ್‌ನಲ್ಲೂ ನಿರಂತರ ಸಂಪರ್ಕ ಹೊಂದಿರುವ ರಾಷ್ಟ್ರಭಕ್ತ ಬಳಗದವರು ಪಾಲಿಕೆಯಲ್ಲಿ ಗೆದ್ದು ಗದ್ದುಗೆ ಹಿಡಿಯುವ ಉಮೇದಿನಲ್ಲಿದ್ದಾರೆ.
ಇಲ್ಲವೇ, ಯಾರೇ ಅಧಿಕಾರ ನಡೆಸಬೇಕಾದರೂ ಸಹ ತಮ್ಮ ಬೆಂಬಲ ಪಡೆಯಲೇಬೇಕೆಂಬ ಹಂಬಲದಲ್ಲಿದ್ದಾರೆ. ಈಗಾಗಲೇ ಪಾಲಿಕೆಗೆ ನಗರ ವ್ಯಾಪ್ತಿಯಿಂದ ಹೊರಗಿರುವ ಕೆಲ ಗ್ರಾಮಗಳನ್ನು ಸೇರಿಸಿಕೊಂಡು ಚುನಾವಣೆ ನಡೆಸಬೇಕೆಂಬ ಬೇಡಿಕೆ ಇದೆ. ಆದರೆ ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ.
ರಾಷ್ಟ್ರಭಕ್ತರ ಬಳಗ, ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಾಣವಾಗುತ್ತಿರುವ ಆಶ್ರಯ ಮನೆ ನಿರ್ಮಾಣದ ಕುರಿತು ಹಾಗೂ ಅಲ್ಲಿ ಮೂಲಸೌಕರ್ಯ ನೀಡುವಂತೆ ಒಮ್ಮೆ ಪ್ರತಿಭಟನೆ ನಡೆಸಿದ್ದರು. ಎರಡನೇ ಬಾರಿ ಆಶ್ರಯ ಮನೆ ನಿರ್ಮಾಣದ ಕುರಿತು ಹಾಗೂ ಚುನಾವಣೆ ನಡೆಸುವಂತೆ ಹಕ್ಕೊತ್ತಾಯ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಜನರ ಗಮನ ಸೆಳೆದು ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
ಈಶ್ವರಪ್ಪನ ಶಿವಮೊಗ್ಗ ನಗರ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದಾರೆ. ಇದರಿಂದ ಇವರ ಪ್ರಭಾವ ನಗರ ಭಾಗದಲ್ಲಿದೆ. ಶಾಸಕರಾಗಿ, ವಿವಿಧ ಮಂತ್ರಿಗಳಾಗಿ, ಉಪ ಮುಖ್ಯಮಂತ್ರಿಯಾಗೂ ಕೆಲಸ ಮಾಡಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ ಪಾಲಿಕೆ 'ಕೈ' ವಶ: ಮೇಯರ್ ಯಲ್ಲಪ್ಪ, ಉಪಮೇಯರ್ ಹೀನಾಬೇಗಂ ಅವಿರೋಧ ಆಯ್ಕೆ - Kalaburagi Corporation Election