ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಎಐಸಿಸಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿಯೇ ಅವರಿಗೆ ಟಿಕೆಟ್ ಘೋಷಣೆಯಾಗಿರುವುದು ಕಾಂಗ್ರೆಸ್ ನಾಯಕರಲ್ಲೂ ಅಚ್ಚರಿ ಮೂಡಿಸಿದೆ. ಗೀತಾ ಶಿವರಾಜ್‌ಕುಮಾರ್ ಟಿಕೆಟ್ ಗಿಟ್ಟಿಸಿಕೊಳ್ಳಲು ಅವರ ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಶ್ರಮ ಕೂಡ ಇದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನೇರ ಹಣಾಹಣಿಗೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಗೀತಾ ಶಿವರಾಜ್‌ಕುಮಾರ್ ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಈ ಮೊದಲು, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಈ ಚುನಾವಣೆಯಲ್ಲಿ ಅವರು 2,40,636 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಈ ಬಾರಿಯೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದ್ದು, ಇದೀಗ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಸಹೋದರನನ್ನು ಮಣಿಸಿದ್ದ ಅವರ ವಿರುದ್ಧ ಸೆಣಸಲು ಗೀತಾ ಸಜ್ಜಾಗಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಶಕ್ತಿ ಏನು?: ಗೀತಾ ಶಿವರಾಜ್‌ಕುಮಾರ್ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಮಗಳು. ಅವರು ತಮ್ಮ ತಂದೆ ಹಾಗೂ ಸಹೋದರ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ಹತ್ತಿರದಿಂದ ನೋಡಿದವರು. ನಟ ಶಿವರಾಜ್‌ಕುಮಾರ್ ಅವರನ್ನು ಮದುವೆಯಾದ ಮೇಲೆ ರಾಜಕೀಯದಿಂದ ದೂರವೇ ಇದ್ದ ಗೀತಾ, 2014ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಸಹೋದರ ಮಧು ಬಂಗಾರಪ್ಪ ಸದ್ಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಕಾಂಗ್ರೆಸ್ ಅಭ್ಯರ್ಥಿ ಗೀತಾಗೆ ಆನೆ ಬಲ ಬಂದಂತಾಗಿದೆ. ಇನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಇವರ ಗೆಲುವಿನ ವಿಶ್ವಾಸ ಹೆಚ್ಚಿಸಿವೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರು ಶಾಸಕರುಗಳು ಇರುವುದು ಚುನಾವಣೆಗೆ ಅನುಕೂಲಕರವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.
2009ರಿಂದ 2024ರ ತನಕ ಮಾಜಿ ಸಿಎಂ ಕುಟುಂಬಗಳ ನಡುವೆ ನೇರ ಹಣಾಹಣಿ: 2009ರಲ್ಲಿ ದಿವಂಗತ ಮಾಜಿ ಸಿಎಂ ಎಸ್ ಬಂಗಾರಪ್ಪ ವಿರುದ್ಧ ಬಿಜೆಪಿಯಿಂದ ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ ಮೊದಲ ಬಾರಿಗೆ ಕಣಕ್ಕಿಳಿದು ಜಯ ಗಳಿಸಿದ್ದರು. ಬಳಿಕ 2014ರಲ್ಲಿ ಯಡಿಯೂರಪ್ಪನವರ ವಿರುದ್ಧ ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿ ಸೋತಿದ್ದರು. 2018ರ ಲೋಕಸಭೆ ಉಪ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ತದನಂತರದ 2019ರ ಲೋಕಸಭೆ ಚುನಾವಣೆಯಲ್ಲೂ ಕೂಡ ಬಿ.ವೈ ರಾಘವೇಂದ್ರ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಮಧು ಬಂಗಾರಪ್ಪಗೆ ಮತ್ತೆ ಸೋಲು ಎದುರಾಗಿತ್ತು. ಹೀಗೆ ಕಳೆದ ನಾಲ್ಕು ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಟುಂಬಗಳು ನೇರ ಹಣಾಹಣಿ ನಡೆಸಿವೆ. ಇದು ಐದನೇ ಚುನಾವಣೆಯಾಗಿದೆ.
ಸಿನಿಮಾ ತಾರೆಗಳು ಪ್ರಚಾರಕ್ಕೆ ಬರುವ ಸಾಧ್ಯತೆ: "ಕಳೆದ ಬಾರಿ ಗೀತಾ ಪರವಾಗಿ ಉಪೇಂದ್ರ, ವಿಜಯ ರಾಘವೇಂದ್ರ, ಶ್ರೀಮುರುಳಿ ಮತ್ತು ವಿನೋದ್ ಪ್ರಭಾಕರ್ ಸೇರಿದಂತೆ ಅನೇಕ ನಟ, ನಟಿಯರು ಪ್ರಚಾರಕ್ಕೆ ಆಗಮಿಸಿದ್ದರು. ಈಗಲೂ ಸಹ ಅನೇಕರು ಪ್ರಚಾರಕ್ಕೆ ಬರುವ ಸಾಧ್ಯತೆಗಳಿವೆ. ನನ್ನ ಪತ್ನಿಯನ್ನು ಸಂಸದೆಯನ್ನಾಗಿ ನೋಡುವ ಆಸೆ ಇದೆ. ನಾನು ನನ್ನ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಗೀತಾ ಪರ ಪ್ರಚಾರ ನಡೆಸುತ್ತೇನೆ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ತಮ್ಮನ ಮನೆ ಪಕ್ಕದಲ್ಲಿಯೇ ಬಾಡಿಗೆ ಮನೆ: ತಮಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ನಗರ ವಿನೋಬನಗರದ ಕಲ್ಲಹಳ್ಳಿಯಲ್ಲಿರುವ ಸಹೋದರ ಮಧು ಬಂಗಾರಪ್ಪನವರ ಮನೆ ಪಕ್ಕದಲ್ಲಿಯೇ ಬಾಡಿಗೆ ಮನೆ ಮಾಡಿದ್ದಾರೆ. ಚುನಾವಣೆ ಪ್ರಚಾರ ನಡೆಸಲು ಕಾರು ಸಹ ಸಿದ್ದವಾಗಿದ್ದು, ಚುನಾವಣಾ ಕಣ ರಂಗೇರಿದೆ.
2009ರಿಂದ ಸ್ಪರ್ಧೆ ವಿವರ:
2009 - ಎಸ್.ಬಂಗಾರಪ್ಪ vs ಬಿ.ವೈ.ರಾಘವೇಂದ್ರ
2014 - ಗೀತಾ ಶಿವರಾಜ್‌ಕುಮಾರ್ vs ಬಿ.ಎಸ್.ಯಡಿಯೂರಪ್ಪ
2018 - ಮಧು ಬಂಗಾರಪ್ಪ vs ಬಿ.ವೈ.ರಾಘವೇಂದ್ರ (ಉಪ ಚುನಾವಣೆ)
2019 - ಮಧು ಬಂಗಾರಪ್ಪ vs ಬಿ.ವೈ.ರಾಘವೇಂದ್ರ
2024 - ಗೀತಾ ಶಿವರಾಜ್‌ಕುಮಾರ್ vs ಬಿ.ವೈ.ರಾಘವೇಂದ್ರ (ಸಾಧ್ಯತೆ)
ಇದನ್ನೂ ಓದಿ: ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡುವೆ: ಬಿ.ಎಸ್.ಯಡಿಯೂರಪ್ಪ