ಶಿವಮೊಗ್ಗ: ನಾವು ಮಾಡಿರುವ ಕೆಲಸ, ಸಾಧನೆ ನೋಡಿ ಮತದಾರರು ನಮ್ಮ ಕೈ ಹಿಡಿಯುತ್ತಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಎರಡನೇ ಸಲ ನಾಮಪತ್ರ ಸಲ್ಲಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಜೆಡಿಎಸ್ ಸಹಕಾರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಗೆ ಜೆಡಿಎಸ್ ಸಹಕಾರ ಸಿಕ್ಕಿರುವುದು ನಮ್ಮ ಸೌಭಾಗ್ಯ. ನಮ್ಮ ಪಕ್ಷದ ಕಾರ್ಯಕರ್ತರು ನೂರಕ್ಕೆ ನೂರರಷ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರ ಕಾಂಗ್ರೆಸ್, ಸಾಗರ ಕಾಂಗ್ರೆಸ್ ಮುಖಂಡರು ಇಂದು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ದೊಡ್ಡ ಹಡಗು ಎಂಬುದಕ್ಕೆ ಇದೊಂದು ಸಾಕ್ಷಿ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಘವೇಂದ್ರ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರ ನಾಮಪತ್ರ ಸಲ್ಲಿಕೆಗೆ ನೆರೆದಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿ. ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಂಘಟನೆ, ಮೋದಿ ಅವರ ಹೆಸರು ಅವರ ಗೆಲುವಿಗೆ ಕಾರಣವಾಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ, ಬಿಜೆಪಿ ಗೆಲ್ಲುತ್ತದೆ ಎಂದ ಮೇಲೆ ಈ ಪ್ರಶ್ನೆ ಎಲ್ಲಿಂದ ಬರುತ್ತದೆ? ಎಂದ ಬೊಮ್ಮಯಿ, ಅವರ ಮನವೊಲಿಕೆಯನ್ನು ವರಿಷ್ಠರು ಮಾಡುತ್ತಾರೆ ಎಂದು ಹೇಳಿದರು.
ಬಿಜೆಪಿ ಟೀಕಿಸಿದರೆ ಓಟು ಬರುತ್ತದೆ ಎಂದರೆ ಅದು ಕನಸು-ಆರಗ ಜ್ಞಾನೇಂದ್ರ: ನೀವು ನಮ್ಮ ಜೊತೆಗಿರಬೇಕು. ಈಗಲಾದರೂ ಮನಸ್ಸು ಮಾಡಿ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಈಶ್ವರಪ್ಪ ಅವರಿಗೆ ಸಲಹೆ ನೀಡಿದರು. ಈಶ್ವರಪ್ಪನವರು ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲಿ. ಬಿಜೆಪಿ ಟೀಕಿಸಿದರೆ ಓಟು ಬರುತ್ತದೆ ಎಂದರೆ ಅದು ಅವರ ಕನಸು. ರಾಘವೇಂದ್ರರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ರಾಮ ಭಕ್ತರ ಮೇಲೆ ಹಲ್ಲೆ ಪ್ರಕರಣ: ಜೈ ಶ್ರೀರಾಮ್ ಘೋಷಣೆ ಕೂಗಿದ ರಾಮನ ಕಾರ್ಯಕರ್ತರನ್ನು ತಡೆದು ಹಲ್ಲೆ ಮಾಡಿ ಅಲ್ಲಾಹು ಅಕ್ಬರ್ ಕೂಗಿಸಿರುವುದು ತಲೆತಗ್ಗಿಸುವ ವಿಚಾರ. ರಾಮೇಶ್ವರಂ ಕೆಫೆಗೆ ಬಾಂಬ್ ಹಾಕಿದರೂ, ದೇಶದ ಸಮಗ್ರತೆಗೆ ಭಂಗವಾದರೂ ಪರವಾಗಿಲ್ಲ, ನಮ್ಮ ಸ್ಥಾನ ಗಟ್ಟಿಯಾದರೆ ಸಾಕು ಎನ್ನುವಂಥವರು ಕಾಂಗ್ರೆಸ್ನವರು ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಾರ್ಟಿ ತೊರೆದಿದ್ದೇನೆ: ಸಂಗಣ್ಣ ಕರಡಿ - Sanganna Karadi