ಬೆಂಗಳೂರು: ಉತ್ತರ ಕನ್ನಡದ ಶಿರೂರು ಎನ್ ಹೆಚ್ ರಸ್ತೆ ಬಳಿ ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಐದು ಲಕ್ಷ ರೂ. ಪರಿಹಾರ ಕೊಡಲು ಈಗಾಗಲೇ ಸೂಚನೆ ನೀಡಲಾಗಿದೆ. ಜೊತೆಗೆ ಮೃತ ದೇಹ ಹುಡುಕುವ ಕೆಲಸ ಆಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಂದು ವಾರದಲ್ಲಿ ಮಳೆ ಜಾಸ್ತಿಯಾಗುತ್ತಿದೆ. ಎನ್ ಹೆಚ್ 66 ರಲ್ಲಿ ಅಂಕೋಲ ಸಮೀಪ ಗುಡ್ಡ ಕಡಿದು ರಸ್ತೆ ಮಾಡಿದ್ದಾರೆ. ಗುಡ್ಡವನ್ನು ಸ್ಟೀಪ್ ಆಗಿ ಕಡಿದಿದ್ದಾರೆ. ಆ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಆ ಕಡಿದ ಗುಡ್ಡ ಕುಸಿದಿದೆ. ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕುಸಿದ ಗುಡ್ಡದ ಪಕ್ಕದಲ್ಲಿ ಡಾಬಾ ಇದ್ದು, ಅಲ್ಲಿ ಮೂರು ಗ್ಯಾಸ್ ಟ್ಯಾಂಕರ್ಸ್ ನಿಲ್ಲಿಸಿ, ಚಾಲಕರು ಟೀ ಕುಡಿಯುತ್ತಾ ಇದ್ದರು. ಕುಸಿತ ಆಗಿ ಎರಡು ಟ್ಯಾಂಕರ್ ಕೊಚ್ಚಿ ಪಕ್ಕದ ನದಿಗೆ ಬಿದ್ದಿವೆ. ಡಾಬಾದ ನಾಲ್ಕು ಸದಸ್ಯರು, ಟ್ಯಾಂಕರ್ನ ಮೂವರು ಚಾಲಕರು ಸಾವಿಗೀಡಾಗಿದ್ದಾರೆ. ಏಳು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದೆ. ಲೋಡೆಡ್ ಗ್ಯಾಸ್ ಟ್ಯಾಂಕರ್ ಇರುವುದರಿಂದ ಬಿಪಿಸಿಎಲ್ ಕಂಪನಿಯವರು ಇದ್ದಾರೆ. ಹೆಚ್ಪಿಸಿಎಲ್ ಅವರು ಅಲ್ಲಿಗೆ ಆಗಮಿಸಿದ್ದಾರೆ. ಎನ್ಡಿಆರ್ಎಫ್ನವರನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರು ಮತ್ತು ಉಡುಪಿಯ ಅಗ್ನಿಶಾಮಕ ದಳದವರೂ ಕಾರ್ಯಾಚರಣೆಯಲ್ಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟು ಎನ್ಹೆಚ್ಎಐ ಮುಖ್ಯಸ್ಥರನ್ನು ಕರೆಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗುತ್ತಿರುವ ಬಗ್ಗೆ ಗಮನ ಹರಿಸುವಂತೆ ನಿರ್ದೇಶನ ನೀಡುತ್ತೇವೆ. ಸಿಎಂ ಕಡೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ. ಹೆದ್ದಾರಿಗಳ ವಿನ್ಯಾಸದಲ್ಲಿ ದೋಷ ಇದೆ. ಹಲವೆಡೆ ಸಮಸ್ಯೆ ಎದುರಾಗುತ್ತಿದೆ. ಹಲವೆಡೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ ಎಂದರು.
ಇದೇ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೃತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ವೇಳೆ, ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮೃತರಿಗೆ ಐದು ಲಕ್ಷ ರೂ. ಪರಿಹಾರ ಕೊಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಉತ್ತರಿಸಿದರು.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಏಳು ಜನರ ದಾರುಣ ಸಾವು, ಮುಂದುವರಿದ ಕಾರ್ಯಾಚರಣೆ - hill collapsed