ಹಾವೇರಿ: ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಐದು ಬಾರಿ ಕ್ಷೇತ್ರ ತನ್ನದಾಗಿಸಿಕೊಂಡ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲೇ ಸುಮಾರು 18 ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಟಿಕೆಟ್ ವಂಚಿತ ಹಾಗೂ ಈ ಹಿಂದೆ ಬೊಮ್ಮಾಯಿ ಎದುರು ಮೂರು ಬಾರಿ ಸೋತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಟೆಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. ತಮ್ಮದೇ ಆದ ಬೆಂಗಳೂರಿನ ನಾಯಕರು, ದೆಹಲಿ ನಾಯಕರ ದುಂಬಾಲು ಬಿದ್ದಿದ್ದಾರೆ. ಅಷ್ಟೇ ಅಲ್ಲ, ಕ್ಷೇತ್ರಕ್ಕೆ ಆಗಮಿಸುವ ನಾಯಕರ ಮುಂದೆ ಶಕ್ತಿ ಪ್ರದರ್ಶನ ಮುಂದುವರೆಸಿದ್ದಾರೆ.
''ನಾನು ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದೇನೆ. ಈ ಬಾರಿ ನನ್ನ ಬೆಂಬಲಕ್ಕೆ ಕಾರ್ಯಕರ್ತರ ಪಡೆ ಇದೆ. ಟಿಕೆಟ್ ನೀಡಿದರೆ ನಾನು ಆರಿಸಿ ಬರುವುದು ಶಥಸಿದ್ಧ'' ಎಂದು ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ.
ಆದರೆ, ಕಳೆದ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಪರಾಜಿತರಾಗಿರುವ ಯಾಸೀರ್‌ಖಾನ್ ಪಠಾಣ, ನನಗೆ ಟಿಕೆಟ್ ಬೇಕು ಎನ್ನುತ್ತಿದ್ದಾರೆ.
ಈ ಮಧ್ಯೆ, ಮಾಜಿ ಸಚಿವ ಆರ್.ಶಂಕರ್ ತಮಗೆ ಟಿಕೆಟ್ ನೀಡಬೇಕು ಎಂದು ಲಾಬಿ ಆರಂಭಿಸಿದ್ದಾರೆ. ಶಿಗ್ಗಾಂವ ಕ್ಷೇತ್ರದಲ್ಲಿ ಶಾಲಾ ಕಾಲೇಜ್‌ಗಳಿಗೆ ಭೇಟಿ ನೀಡುತ್ತಿರುವ ಶಂಕರ್, ನೋಟ್‌ಬುಕ್ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸುತ್ತಿದ್ದಾರೆ. ನನಗೆ ಟಿಕೆಟ್ ನೀಡಿದರೆ ಈ ಹಿಂದೆ ಇದ್ದ ರಾಣೆಬೆನ್ನೂರು ಕ್ಷೇತ್ರ ಅಭಿವೃದ್ಧಿ ಮಾಡಿದಂತೆ ಶಿಗ್ಗಾಂವ್ ಸವಣೂರು ಕ್ಷೇತ್ರವನ್ನೂ ಅಭಿವೃದ್ದಿ ಮಾಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಸಹ ಆಕಾಂಕ್ಷಿಯಾಗಿದ್ದಾರೆ. ''ನಾನು ಸ್ಥಳೀಯ ವ್ಯಕ್ತಿ. ಹಾವೇರಿ ನಗರಸಭೆ ಅಧ್ಯಕ್ಷನಾಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ನನಗೆ ಟಿಕೆಟ್ ಸಿಗುವುದು ಪಕ್ಕಾ'' ಎಂದು ಹೇಳಿದ್ದಾರೆ.
ದಲಿತ ಯುವ ನಾಯಕ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಬಂಡಿವಡ್ಡರ ಅವರು, ತಾನೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ದಲಿತರಿಗೆ ಒಂದು ಟಿಕೆಟ್ ನೀಡಿ ನೋಡಿ. ಈ ಕ್ಷೇತ್ರದಲ್ಲಿ ಸುಮಾರು ಮುಸ್ಲಿಂ ಮತ್ತು ದಲಿತರೇ ನಿರ್ಣಾಯಕರು. ನನಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದಿದ್ದಾರೆ.
ಇವರ ಜೊತೆಗೆ ಸೋಮಣ್ಣ ಬೇವಿನಮರದ, ಪ್ರೇಮಾ ಪಾಟೀಲ್, ರಾಜೇಶ್ವರಿ ಪಾಟೀಲ್, ರಾಜು ಕುನ್ನೂರು ಸೇರಿದಂತೆ ಸುಮಾರು 18 ಟಿಕೆಟ್ ಅಕಾಂಕ್ಷಿಗಳು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ನಾಯಕರು, ದಲಿತ ನಾಯಕರು, ಮಹಿಳೆಯರ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ಆಕಾಂಕ್ಷಿಗಳು ಟಿಕೆಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ತಪ್ಪು ಮಾಡಿದವರು ಒಪ್ಪಿಕೊಳ್ಳಬೇಕು- ಸಚಿವ ಸತೀಶ್ ಜಾರಕಿಹೊಳಿ - Satish Jarakiholi