ಹಾವೇರಿ: ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಶಿಗ್ಗಾಂವ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬುಧವಾರ ಶಿಗ್ಗಾಂವ ಕ್ಷೇತ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡುವ ಮುನ್ನವೇ ಶಿಗ್ಗಾಂವ ಐಬಿ ಮುಂದೆ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹಾಗೂ ಯಾಸೀರಾಹ್ಮದಖಾನ್ ಪಠಾಣ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ಬರುವ ಮೊದಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಕಿತ್ತಾಟ ನಡೆದಿದೆ. ಉಪ ಚುನಾವಣೆಗೆ ಮುಹೂರ್ತ ಘೋಷಣೆ ಮುನ್ನವೇ ಟಿಕೆಟ್ಗಾಗಿ ಆಕಾಂಕ್ಷಿಗಳು ಕಿತ್ತಾಡಿಕೊಂಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿಗೆ ಸ್ವಾಗತ ಕೋರಲು ಜಿದ್ದಿಗೆ ಬಿದ್ದು ಟಿಕೆಟ್ ಆಕಾಂಕ್ಷಿಗಳು ಬ್ಯಾನರ್ ಕಟೌಟ್ ಹಾಕಿಸಿದ್ದಾರೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ಯಾಸೀರ್ ಖಾನ್ ಪಠಾಣ್ ನಡುವೆ ಕಟೌಟ್ ಪಾಲಿಟಿಕ್ಸ್ ನಡೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಗಮನ ಸೆಳೆಯಲು ಕಸರತ್ತು ಜೋರಾಗಿಯೇ ಮಾಡಿದ್ದಾರೆ.
ಶಿಗ್ಗಾಂವ ಪ್ರವಾಸಿ ಮಂದಿರದ ಮುಂದೆ ದೊಡ್ಡ ದೊಡ್ಡ ಕಟೌಟ್ ಬ್ಯಾನರ್ ಹಾಕಿಸಿರುವ ಟಿಕೆಟ್ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ ತೋರಿದರು. ಸತೀಶ್ ಜಾರಕಿಹೊಳಿ ಬರುವ ಮೊದಲೇ ಐಬಿ ಬಳಿ ಆಗಮಿಸಿದ ಖಾದ್ರಿ, ಯಾಸೀರ್ ಖಾನ್ ಪಠಾಣ್ ಬೆಂಬಲಿಗರು ಪ್ರತ್ಯೇಕವಾಗಿ ಗುಂಪು ಗುಂಪಾಗಿ ನಿಂತಿದ್ದರು.