ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿತು. ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮತ್ತು ಸಿಐಡಿ ಪೊಲೀಸರು ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸಂಬಂಧ ಪ್ರತ್ಯೇಕವಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಸಂತ್ರಸ್ತರ ಹೆಸರು ಮತ್ತು ಅಶ್ಲೀಲ ವಿಚಾರಗಳನ್ನು ವಕೀಲರು ಓದಬಾರದು. ಅದನ್ನು ನನಗೆ ತಿಳಿಸಿದರೆ ನಾನೇ ಓದಿಕೊಳ್ಳುತ್ತೇನೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಇದೇ ವೇಳೆ, ಪ್ರತಿದಿನ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದರಿಂದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಹೊಸದೇನಿದೆ ಎಂದು ಪ್ರಶ್ನಿಸಿದರು.
ವಿಚಾರಣೆ ವೇಳೆ, ಪ್ರಜ್ವಲ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರು, ಗೌಪ್ಯ ವಿಚಾರಣೆಗೆ ಮನವಿ ಮಾಡಿದರು.
ವಿಶೇಷ ತನಿಖಾ ದಳವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್, ಗೌಪ್ಯ ವಿಚಾರಣೆಯನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗುವುದು ಎಂದರು.
ಇದಕ್ಕೆ ಅರ್ಜಿದಾರರ ವಕೀಲರು, ಆರೋಪಪಟ್ಟಿಗಳು ಲಭ್ಯವಾಗಿಲ್ಲ. ಹೀಗಾಗಿ, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಬೇಕೆಂದು ಕೋರಿದರು. ಇದಕ್ಕೆ ಪೀಠ, "ಆರೋಪಪಟ್ಟಿಗಳು ಸಂಪುಟಗಟ್ಟಲೆ ಇವೆ" ಎಂದು ಹಾಸ್ಯಚಟಾಕಿ ಹಾರಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು.
ಹೊಳೆನರಸೀಪುರದ ನಗರ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಜ್ವಲ್ ವಿರುದ್ಧ ಎಸ್ಐಟಿ 2,144 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಮನೆಗೆಲಸದಾಕೆ ಮೇಲೆ ಎಸಗಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 1,632 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಇನ್ನೂ ಎರಡು ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಬೇಕಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ - Prajwal Revanna