ದಾವಣಗೆರೆ: ವಾಂತಿ-ಭೇದಿ ಕಾಣಿಸಿಕೊಂಡ ಪರಿಣಾಮ ಒಟ್ಟು ಏಳು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ಓರ್ವ ಮಹಿಳೆ ಸಾವನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುಣಸಘಟ್ಟ ಗ್ರಾಮದಲ್ಲಿ ಆ. 21ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹುಣಸಘಟ್ಟದ ಗ್ರಾಮಸ್ಥರು ಕಲುಷಿತ ನೀರು ಸೇವನೆಯಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆ. 21ರಂದು ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಹುಣಸಘಟ್ಟ ನಿವಾಸಿ ಚಂದ್ರಮ್ಮ (60) ಮೃತಪಟ್ಟವರು. ಗ್ರಾಮದಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದರಿಂದ ಮೃತ ಚಂದ್ರಮ್ಮ ಸೇರಿ ಗ್ರಾಮದ ಒಟ್ಟು ಏಳು ಜನರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಆ.21 ರಂದು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವಾಂತಿ–ಭೇದಿ ಹಾಗೂ ಜ್ವರದಿಂದ ಬಳಲುತ್ತಿದ್ದ ಚಂದ್ರಮ್ಮ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಆದರೆ ಚಂದ್ರಮ್ಮ ಕಲುಷಿತ ನೀರು ಸೇವಿಸಿ ಮೃತರಾಗಿದ್ದಾರೆಂಬುದು ಇನ್ನೂ ದೃಢಪಟ್ಟಿಲ್ಲ.
ಈ ಬಗ್ಗೆ ಈಟಿವಿ ಭಾರತ ಜೊತೆ ಹೊನ್ನಾಳಿ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಎನ್. ಹೆಚ್ ಗಿರೀಶ್ ಮಾತನಾಡಿ, "ಮೃತ ಚಂದ್ರಮ್ಮ ಹಾಗೂ ಉಳಿದ ಆರು ಜನ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿಲ್ಲ. ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಏಳು ಜನರ ಪೈಕಿ ಒಬ್ಬರಿಗೆ ಮಾತ್ರ ಕಾಲರ ಇತ್ತು. ಆರು ಜನರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ವರದಿ ಕೈ ಸೇರಿದೆ'' ಎಂದಿದ್ದಾರೆ.
ಇದನ್ನೂ ಓದಿ : ಬೋರ್ವೇಲ್ ನೀರು ಸೇವಿಸಿ 41 ಜನರಿಗೆ ವಾಂತಿ, ಭೇದಿ; ಓರ್ವ ಮಹಿಳೆ ಐಸಿಯುಗೆ ದಾಖಲು - Vomiting And Diarrhea Cases