ಹುಬ್ಬಳ್ಳಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಯಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಪ್ರತ್ಯೇಕತೆಯ ಹೋರಾಟ ಅನಿವಾರ್ಯವಾಗುತ್ತದೆ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಎಚ್ಚರಿಸಿದ್ದಾರೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿರಂತರವಾಗಿ ಉತ್ತರ ಕರ್ನಾಟಕದ ಮೇಲೆ ತಾರತಮ್ಯ ನಡೆಯುತ್ತಿದೆ. ಸುವರ್ಣಸೌಧ ಕಟ್ಟಿ ಹತ್ತಾರು ವರ್ಷ ಕಳೆದರೂ ಅಭಿವೃದ್ಧಿ ವಿಚಾರದಲ್ಲಿ ಸೊನ್ನೆ. ಚಳಿಗಾಲದ ಅಧಿವೇಶನ ಕೇವಲ ಹೋರಾಟಕ್ಕೆ ಸೀಮಿತವಾಗಿದೆ. ಅಭಿವೃದ್ಧಿ ವಿಷಯವಾಗಿ ಚರ್ಚೆ ನಡೆಯುತ್ತಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ನೀರಾವರಿ ವಿಷಯಗಳಾದ ಕೃಷ್ಣ ಮೇಲ್ದಂಡೆ ಯೋಜನೆ, ತುಂಗಭದ್ರ ಹೂಳೆತ್ತುವ ಕಾರ್ಯ ಹಾಗೂ ಕಾಲುವೆ ಅಭಿವೃದ್ಧಿ ವಿಷಯಗಳ ಚರ್ಚೆ ಆಗಲೇಬೇಕು. ನಾಲ್ಕು ದಶಕಗಳಿಂದ ಕೇವಲ ಕಳಸಾ ಬಂಡೂರಿ, ಮಹದಾಯಿ ವಿಚಾರವಾಗಿ ಮಾತ್ರ ಹೋರಾಟ ಚರ್ಚೆ ಸೀಮಿತವಾಗಿದೆ. ಈ ಬಾರಿ ಗಂಭೀರವಾದಂತಹ ಚರ್ಚೆ ಮುಖಾಂತರ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ. ಎರಡೂ ಪಕ್ಷಗಳಿಗೆ ತಮ್ಮ ಅಸ್ತಿತ್ವ ಮಾತ್ರ ಬೇಕಿದೆ. ಸದನದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕು. ನಿರುದ್ಯೋಗ, ಕಬ್ಬಿನ ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ ಅಲ್ಲಿ ರೈತರ ಪರ ಚರ್ಚೆ ನಡೆಯುತ್ತಿಲ್ಲ. ಸಿಎಂ, ಡಿಸಿಎಂ ಆರ್.ಅಶೋಕ್ ಅವರು ಮೇಕೆದಾಟು, ಕಾವೇರಿ ಬಗ್ಗೆ ಮಾತ್ರ ಇಷ್ಟಪಡುತ್ತಾರೆ. ಇವರು ಉತ್ತರ ಕರ್ನಾಟಕದಲ್ಲಿ ಅಧಿವೇಶನ ಯಾವ ಪರುಷಾರ್ಥಕ್ಕೆ ನಡೆಸುತ್ತಾರೆ?. ಅಧಿವೇಶನ ನಡೆಸುವುದಾದ್ರೆ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಮತ್ತೆ ಮುಡಾ, ವಕ್ಫ್ ಅಂತ ಹೋದ್ರೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು. ಅದಕ್ಕೂ ಬಗ್ಗದಿದ್ರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ, ಮೇಲ್ಮನೆ ಪ್ರತಿಪಕ್ಷದ ನಾಯಕ, ಪ್ರಮುಖ ಖಾತೆಗಳು ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿವೆ. ಎಲ್ಲಾ ಅಧಿಕಾರ ನೀವೇ ಇಟ್ಟುಕೊಂಡು ತಾರತಮ್ಯ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಂಪುಟ ಸಭೆಯಲ್ಲಿ 9 ವಿಧೇಯಕಗಳಿಗೆ ಅನುಮೋದನೆ: ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಮಸೂದೆ ಮಂಡನೆಗೆ ಅಸ್ತು