ಬೆಂಗಳೂರು: 2024ರ ದ್ವಿತೀಯ ಪಿಯುಸಿ ಪರೀಕ್ಷೆ-2 ಇಂದಿನಿಂದ ಆರಂಭಗೊಂಡಿದ್ದು, ಮೇ 16ರವರೆಗೆ ನಡೆಯಲಿದೆ. ರಾಜ್ಯಾದ್ಯಂತ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸುಗಮ ರೀತಿಯಲ್ಲಿ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕ್ರಮ ಕೈಗೊಂಡಿದೆ.
ಇದೇ ಮೊದಲ ಬಾರಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾರಿಗೆ ತಂದಿರುವ ಮೂರು ಪರೀಕ್ಷೆಗಳ ವ್ಯವಸ್ಥೆಯಡಿ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪರೀಕ್ಷೆ ನಡೆಯುತ್ತಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಒಟ್ಟು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 32,848 ವಿದ್ಯಾರ್ಥಿಗಳು ಫಲಿತಾಂಶವನ್ನು ಉನ್ನತೀಕರಿಸಿಕೊಳ್ಳಲು ಪರೀಕ್ಷೆ ತೆಗೆದುಕೊಂಡಿದ್ದು, 27,092 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ನಾಟ್ ಕ್ಲಿಯರ್ಡ್ ವಿದ್ಯಾರ್ಥಿಗಳ ಸಂಖ್ಯೆ 89,221 ಆಗಿದ್ದು, 139 ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿ ಇಲ್ಲದೇ 17 ವರ್ಷ ತುಂಬಿದ ಖಾಸಗಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.
ಒಟ್ಟು 84,933 ವಿದ್ಯಾರ್ಥಿಗಳು, 64,367 ವಿದ್ಯಾರ್ಥಿನಿಯರು ಸೇರಿ 1,49,300 ಅಭ್ಯರ್ಥಿಗಳು ಪರೀಕ್ಷೆ 2ಕ್ಕೆ ಹಾಜರಾಗುತ್ತಿದ್ದು, ಕಲಾ ವಿಭಾಗದಲ್ಲಿ 52,492, ವಾಣಿಜ್ಯ ವಿಭಾಗದಲ್ಲಿ 39,427 ಮತ್ತು ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.