ಹೊಸಕೋಟೆ(ಬೆಂ.ಗ್ರಾ): ಕಾಣೆಯಾಗಿದ್ದ ಬಾಲಕಿಯೊಬ್ಬಳು ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಪೋಷಕರು ಯುವಕನೋರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ದಲಿತ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ದೌರ್ಜನ್ಯ ಮತ್ತು ಪೋಕ್ಸೋ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿವೆ.
''ಈ ಘಟನೆಗೂ ಮುನ್ನ ಶಾಲೆಗೆ ಹೋಗುತ್ತಿದ್ದ ಬಾಲಕಿಯ ಮೇಲೆ ನಿತೀಶ್ ಎಂಬಾತ ಹಲ್ಲೆ ಮಾಡಿದ್ದ. ಈ ವಿಷಯ ಗೊತ್ತಾಗಿ ನಾವು ಲಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಪೊಲೀಸರು ಎಲ್ಲರನ್ನೂ ಕರೆಸಿದ್ದರು. ನಾವು ಕೂಡ ಹೋಗಿದ್ದೆವು. ನಿತೀಶ್ ಪರವಾಗಿ ಹರೀಶ್, ಲಕ್ಷಣ್, ಸುರೇಶ್ ಮತ್ತು ಮಂಜುನಾಥ್ ಎಂಬವರು ಬಂದಿದ್ದರು. ಪೊಲೀಸರ ಮುಂದೆ ಮಾತುಕತೆಯೂ ಆಗಿತ್ತು. ಈ ವೇಳೆ ನಿಮ್ಮ ಹುಡುಗಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಅವರು ಮಾತು ಕೊಟ್ಟಿದ್ದರು'' ಎಂದು ಬಾಲಕಿಯ ತಂದೆ ಹೇಳಿದ್ದಾರೆ.
''ಆದರೆ, ಫೆ.7ರಂದು ಬೆಳಿಗ್ಗೆ ಶಾಲೆಗೆ ತೆರಳಿದ್ದ ನಮ್ಮ ಮಗಳು ಸಂಜೆ ವಾಪಸ್ ಬರಲಿಲ್ಲ. ತಕ್ಷಣ ನಾವು ಮಾಲೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ನೀಡಿದೆವು. ಇನ್ನೊಂದೆಡೆ ನನ್ನ ಸಹೋದರ ಫೋನ್ ಮಾಡಿ, ಆ ಹುಡುಗ (ನಿತೀಶ್) ಕತ್ತು ಕೊಯ್ದುಕೊಂಡಿದ್ದಾನೆ. ನಿನ್ನ ಮಗಳು ಎಲ್ಲಿದ್ದಾಳೆ ಎಂದು ಕೇಳಿದ. ಆ ಬಳಿಕ ನಾವು ಮಗಳನ್ನು ಹುಡುಕಲು ಶುರು ಮಾಡಿದೆವು. ಅಷ್ಟರಲ್ಲೇ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಮಗಳ ಕೊಲೆಗೆ ನಿತಿನ್ ಮತ್ತು ಆತನ ಪರವಾಗಿ ಬಂದವರೇ ಕಾರಣ'' ಎಂದು ಬಾಲಕಿಯ ತಂದೆ ಆರೋಪ ಮಾಡಿದ್ದಾರೆ.
ಬಾಲಕಿಯನ್ನು ಕೊಲೆಗೈದ ಆರೋಪಿ ನಿತಿನ್ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿ, ಸದ್ಯ ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೇರೆಡೆ ಕೊಲೆ ಮಾಡಿ ಶವವನ್ನು ಹೊಸಕೋಟೆ ವ್ಯಾಪ್ತಿಯಲ್ಲಿ ಎಸೆದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಕೋರ್ಟ್‌ಗೆ 1,100 ಪುಟಗಳ ಆರೋಪಪಟ್ಟಿ ಸಲ್ಲಿಕೆ