ದಾವಣಗೆರೆ: ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ-ಪಾಠದ ಜೊತೆಗೆ ಕೆಲವು ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ, ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆಯಲ್ಲಿರುವ ಶಾಲೆಯೊಂದು ಮಕ್ಕಳನ್ನು ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡಿಸುವ ಮೂಲಕ ಕೃಷಿಯ ಮಹತ್ವ ತಿಳಿಸುವ ಕೆಲಸ ಮಾಡಿದೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ, ಕಮ್ಮಾರಗಟ್ಟೆಯಲ್ಲಿರುವ ಪೋದಾರ್ ಲರ್ನ್ ಶಾಲೆಯ 4ರಿಂದ 6ನೇ ತರಗತಿಯ ಮಕ್ಕಳನ್ನು ಶಾಲೆಯ ಪಕ್ಕದಲ್ಲೇ ಇರುವ ಗದ್ದೆ ಕರೆದೊಯ್ದು ಗದ್ದೆ ಎಂದರೆ ಏನು?, ಬೇಸಾಯ ಎಂದರೆ ಹೇಗೆ?, ನಾಟಿ ಹೇಗೆ ಮಾಡಬೇಕು ಎಂದೆಲ್ಲ ಮಾಹಿತಿ ನೀಡುತ್ತಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಯಿತು. ಸ್ವತಃ ಮಕ್ಕಳೇ ಭತ್ತ ನಾಟಿ ಮಾಡಿ ಸಂತಸ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ನಾಯ್ಕ ಮಾತನಾಡಿ, ಇದು ಇಂಡಿಯಾ ಫಸ್ಟ್ ಫೆಸ್ಟ್. ಕೃಷಿಗೆ ಸಂಬಂಧಿಸಿದ ಚಟುವಟಿಕೆಯನ್ನು ಮಕ್ಕಳಿಗೋಸ್ಕರ ಆಯೋಜಿಸಿದ್ದೇವೆ. ಸದ್ಯ ಎಲ್ಲಾ ಮಕ್ಕಳಿಗೂ ಡಾಕ್ಟರ್, ಇಂಜಿನಿಯರ್ ಆಗಬೇಕು ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಗುರಿ ಇರುತ್ತದೆ. ಆದರೆ ಯಾರೂ ರೈತನಾಗಲು ಬಯಸುವುದಿಲ್ಲ. ರೈತರು ಎಂದರೆ ಯಾರು? ನಾವು ತಿನ್ನುತ್ತಿರುವ ಅನ್ನ ಎಲ್ಲಿಂದ ಬರುತ್ತಿದೆ, ಅದರ ಹಿಂದೆ ಎಷ್ಟು ಜನರ ಶ್ರಮ ಇದೆ ಎಂದು ಮಕ್ಕಳಿಗೆ ತಿಳಿಸುವ ಸಲುವಾಗಿ ಪೋದಾರ್ ಸಂಸ್ಥೆ ಈ ಉಪಕ್ರಮವನ್ನು ಮಾಡುತ್ತಿದೆ. 4ರಿಂದ 6ನೇ ತರಗತಿಯ ಮಕ್ಕಳು ತುಂಬಾ ಖುಷಿ ಮತ್ತು ಹುಮ್ಮಸ್ಸಿನಿಂದ ಭತ್ತ ನಾಟಿ ಮಾಡುತ್ತಿದ್ದಾರೆ. ಇದರಲ್ಲಿ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದಾರೆ. ಇಲ್ಲಿ ಬೆಳೆದ ಭತ್ತದಿಂದ ಶಾಲಾ ವಾರ್ಷಿಕೋತ್ಸದಂದು ವಿದ್ಯಾರ್ಥಿಗಳ ಪೋಷಕರಿಗೆ ಊಟ ಹಾಕಿಸುವ ಯೋಜನೆ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಮಾನ್ಯ ಮಾತನಾಡಿ, ನಮ್ಮಿಂದ ಭತ್ತ ನಾಟಿ ಮಾಡಿಸಲಾಯಿತು, ಭತ್ತ ನಾಟಿ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟರು. ಮಕ್ಕಳು ಲಾಂಚ್ ಬಾಕ್ಸ್ನಲ್ಲಿ ಹಾಕಿ ಕೊಟ್ಟ ಅನ್ನವನ್ನು ವ್ಯರ್ಥ ಮಾಡುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ನಮಗೆ ಅರಿವು ಮೂಡಿಸಲಾಯಿತು. ನಮ್ಮ ಸ್ನೇಹಿತರೊಂದಿಗೆ ಭತ್ತ ನಾಟಿ ಮಾಡಿದ್ದಕ್ಕೆ ತುಂಬಾ ಖುಷಿಯಾಯ್ತು ಎಂದು ಹೇಳಿದರು.