ವಿಜಯಪುರ: ಸಾವು ಗೆದ್ದು ಬಂದಿರುವ ಮಗು ಸಾತ್ವಿಕ್ ಎಂದಿನಂತೆ ತಮ್ಮ ಮನೆಯಂಗಳದಲ್ಲಿ ಆಟವಾಡುತ್ತಿದ್ದಾನೆ. ತಂದೆ, ತಾಯಿ, ಬಂಧು ಬಳಗದೊಂದಿಗೆ ತನಗಿಷ್ಟದ ಟೆಡ್ಡಿಬೇರ್ ಹಿಡಿದು ತುಂಟಾಟ ಮಾಡುತ್ತಿದ್ದಾನೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿರುವ ಆತನ ತೋಟದ ಮನೆಗೆ ಜನರು ಕೂಡಾ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕೊಳವೆಬಾವಿಯಲ್ಲಿ ಸಿಲುಕಿದ್ದ ಬಾಲಕನನ್ನು 20 ಗಂಟೆಗಳ ಕಾರ್ಯಾಚರಣೆಯ ಮೂಲಕ ಇತ್ತೀಚಿಗೆ ರಕ್ಷಿಸಲಾಗಿತ್ತು. ನಂತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
"ಸಾಲದ ಸುಳಿಯಲ್ಲಿರುವ ರೈತನ ನೆರವಿಗೆ ಸರ್ಕಾರ ಬರಬೇಕು. ಜಿಲ್ಲಾಡಳಿತದಿಂದ ಕಾರ್ಯಾಚರಣೆ ನಡೆಸಿದ ಗುಂಡಿ ಮುಚ್ಚಿ ಕೊಡಬೇಕು" ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ ಆಗ್ರಹಿಸಿದ್ದಾರೆ.
ಈ ಮೊದಲು ನಡೆದ ಕೊಳವೆ ಬಾವಿ ದುರಂತದಲ್ಲಿ ಜಿಲ್ಲಾಡಳಿತವೇ ಗುಂಡಿ ಮುಚ್ಚಿ ರೈತರ ನೆರವಿಗೆ ಬಂದಿವೆ. ಇದೀಗ ಲಚ್ಯಾಣ ಗ್ರಾಮದ ಕೊಳವೆ ಬಾವಿ ಪಕ್ಕದಲ್ಲಿ ತೆಗೆಯಲಾದ 20 ಅಡಿ ಆಳದ ಗುಂಡಿ ಮುಚ್ಚಿಕೊಡಬೇಕು. ಮಾನವೀಯತೆ ದೃಷ್ಟಿಯಿಂದ ಕೊಳವೆ ಬಾವಿ ತೋಡಿಸಿದ ರೈತ ಶಂಕ್ರಪ್ಪ ಮುಜಗೊಂಡ ವಿರುದ್ಧ ಕೇಸ್ ದಾಖಲಿಸದಂತೆಯೂ ಅವರು ಮನವಿ ಮಾಡಿದ್ದಾರೆ.