ಮೈಸೂರು: ಅಂತಾರಾಷ್ಟ್ರೀಯ ಪ್ರಸಿದ್ಧಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ್ (92) ಅವರು ಮಂಗಳವಾರ ಸಂಜೆ 6.30ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಅಂತಿಮ ದರ್ಶನ: ಬುಧವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕುವೆಂಪುನಗರದ ಜ್ಞಾನ ಗಂಗಾ ಶಾಲೆ ಹತ್ತಿರದ ಅವರ ಮನೆಯೆದುರು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮೈಸೂರಿನಲ್ಲಿ ವಾಸ: ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ವಿಶ್ವಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾಗಿದ್ದ ರಾಜೀವ್ ತಾರಾನಾಥ್ 1932ರ ಅಕ್ಟೋಬರ್ 17ರಂದು ಜನಿಸಿದ್ದರು. ಮೈಸೂರಿನಲ್ಲಿ ವಾಸವಿದ್ದರು. ಇವರ ಸರೋದ್ ವಾದನಕ್ಕೆ ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಕಾಲೇಜ್ನಲ್ಲಿ ಬಿ.ಎ.ಆನರ್ಸ್ ಪದವಿಯನ್ನು ಮೊದಲ ಶ್ರೇಯಾಂಕದಲ್ಲಿ ಗಳಿಸಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಇಂಗ್ಲಿಷ್ನಲ್ಲಿ ಚಿನ್ನದ ಪದಕ ಪಡೆದಿದ್ದರು. ಪ್ರೊ.ಸಿ.ಡಿ.ನರಸಿಂಹಯ್ಯ ಮಾರ್ಗದರ್ಶನದಲ್ಲಿ "ಇಮೇಜ್ ಇನ್ ಪೊಯಿಟ್ರಿ ಆಫ್ ಟ.ಎಸ್.ಎಲಿಯೆಟ್" ಕುರಿತು ಪ್ರಬಂಧ ಮಂಡಿಸಿ ಮೈಸೂರು ವಿವಿಯಿಂದ ಪಿಹೆಚ್ಡಿ ಪದವಿ ಪಡೆದಿದ್ದರು.
ಉಪನ್ಯಾಸಕರಾಗಿ ವೃತ್ತಿ ಆರಂಭ: ರಾಯಚೂರಲ್ಲಿ ಅವರ ತಂದೆ ಕಟ್ಟಿದ ಹಮ್ ದರ್ದ ಕಾಲೇಜಿನಲ್ಲಿ ಉಪನ್ಯಾಸಕರಾಗಿ (1963) ವೃತ್ತಿ ಆರಂಭಿಸಿದ್ದ ಇವರು ಬಳಿಕ ಧಾರವಾಡದ ಕರ್ನಾಟಕ ಕಾಲೇಜು (1964), ಮೈಸೂರು ರಿಜಿನಲ್ ಕಾಲೇಜ್ ಆಫ್ ಎಜುಕೇಷನ್ (1965-68), ತಿರುಚ್ಚಿಯ ರೀಜನಲ್ ಕಾಲೇಜ್ ಆಫ್ ಎಜುಕೇಷನ್ (1968-74), ಹೈದರಾಬಾದ್ನ ಸೆಂಟ್ರಲ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರೀನ್ ಲಾಂಗ್ವೇಜಸ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಯೆಮನ್ ದೇಶದ ಏಡನ್ (1980) ಇಂಗ್ಲಿಷ್ ಅಧ್ಯಾಪಕರಾಗಿ, ಪುಣೆಯ ಫಿಲ್ಮ್ ಇನ್ಸ್ಸ್ಟಿಟ್ಯೂಟ್ ಸಿನಿಮಾ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿಯೂ (1981-82) ಕಾರ್ಯನಿರ್ವಹಿಸಿದ್ದಾರೆ.
ಇವರ ಸಂಗೀತ ನಿರ್ದೇಶನದ ಸಿನಿಮಾಗಳು: ಸಿನಿಮಾ ಸಂಗೀತ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೃಷಿ ಮಾಡಿದ್ದಾರೆ. ಕನ್ನಡದಲ್ಲಿ ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಅನುರೂಪ, ಪೇಪರ್ ಬೋಟ್ಸ್, ಶೃಂಗಾರ ಮಾಸ, ಆಗುಂತಕ ಮತ್ತು ಮಳಯಾಳಂನಲ್ಲಿ ಕಡವು, ಪೊಕ್ಕುವೇಯಿಲ್, ಕಾಂಚನಸೀತೆ ಸಿನಿಮಾಗಳಲ್ಲಿ ಸಂಗೀತ ನಿರ್ದೇಶಿಸಿ ಯಶಸ್ವಿಯಾಗಿದ್ದರು.
ಸಾಧನೆಗಳು: ಸಿಡ್ನಿಯ ಪ್ರಸಿದ್ಧ ಒಪೇರಾ ಹೌಸ್ನಲ್ಲಿ ಸರೋದ್ ನುಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಯೆಮನ್ ದೇಶದ ಎಡನ್ ನಗರದ ದೂರದರ್ಶನ ಕೇಂದ್ರವು ರಾಜೀವ್ ತಾರಾನಾಥ್ ಅವರ ಕುರಿತು ಫಿನ್ನನ್ ಮಿನ್-ಅಲ್-ಹಿಂದ್ (ಭಾರತೀಯ ಕಲಾಕಾರ) ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿ ಗೌರವಿಸಿದೆ. ಫೋರ್ಡ್ ಫೌಂಡೇಷನ್ ಫೆಲೋಶಿಫ್ ಪಡೆದ (1989-92) ಅವರು ಮೈಹರ್- ಅಲ್ಲಾವುದ್ದೀನ್ ಘರಾನಾದಲ್ಲಿ ಸಂಗೀತ ಶಿಕ್ಷಣ ಕುರಿತು ಸಂಶೋಧನೆ ನಡೆಸಿದ್ದರು. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯವಾದ ಲಾಸ್-ಏಂಜಲಿಸ್ ನಗರದ ಕ್ಯಾಲಿಫೋರ್ನಿಯಾ ಇನ್ಸ್ಸ್ಪಿಟ್ಯೂಟ್ ಆಫ್ ದಿ ಆರ್ಟ್ಸ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಹಿರಿಮೆ ಇವರದ್ದಾಗಿದೆ.
ಪ್ರಶಸ್ತಿ-ಪುರಸ್ಕಾರ: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ಕರ್ನಾಟಕ ಸರ್ಕಾರದ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (1998) ಮತ್ತು ಗಾಯನ ಸಮಾಜದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.
ಸಿಎಂ ಸಂತಾಪ: ಜಗತ್ಪ್ರಸಿದ್ಧ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.