ಧಾರವಾಡ: "ರಷ್ಯಾಗೆ ದುಡಿಯಲು ಹೋದವರನ್ನು ಅಲ್ಲಿ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲಿ 8 ಜನ ಸತ್ತಿದ್ದಾರೆ. ಇದಕ್ಕೆ ಬಿಜೆಪಿಗರು ಉತ್ತರ ನೀಡಬೇಕು" ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "70 ವರ್ಷದ ಇತಿಹಾಸದಲ್ಲಿ ಬಹಳ ಜನ ಕೆಲಸ ಮಾಡಲು ವಿದೇಶಕ್ಕೆ ಹೋಗಿದ್ದಾರೆ. ಮೋದಿ ಸಾಹೇಬರು ಬರುವ ಮುಂಚೆ ಯಾರನ್ನೂ ಯುದ್ಧಕ್ಕೆ ಬಳಸಿಲ್ಲ. ಆದರೆ ಈಗ 67 ಜನ ರಷ್ಯಾಗೆ ಹೋದವರನ್ನು ಯುದ್ಧಕ್ಕೆ ಬಳಸಿದ್ದಾರೆ. 67 ಜನರಲ್ಲಿ 8 ಜನ ಜೀವ ಕಳೆದುಕೊಂಡಿದ್ದಾರೆ. ಇದು ದೇಶದ ದೊಡ್ಡ ನ್ಯೂಸ್, ಇದು ದೊಡ್ಡ ಸುದ್ದಿಯಾಗಬೇಕಲ್ವಾ?" ಎಂದು ಪ್ರಶ್ನಿಸಿದರು.
ಮುಂದುವರೆದು, "ಅವರು ಯಾವುದೇ ಕೆಲಸಕ್ಕೆ ಹೋಗಿರಲಿ, ಅವರನ್ನು ಮಿಲಿಟರಿಗೆ ಬಳಸಬಹುದಾ? ಮೊನ್ನೆ ಸಂಸತ್ನಲ್ಲಿ ವಿದೇಶಾಂಗ ಸಚಿವರು ಉತ್ತರ ಕೊಟ್ಟಿದ್ದಾರೆ. ಒಂದು ತಲೆಗೆ ಹತ್ತು ತಲೆ ತರುತ್ತೇವೆ ಅಂತಾ ಪ್ರಧಾನಿ ಹೇಳುತ್ತಾರೆ. 78ನೇ ಸ್ವಾತಂತ್ರ್ಯ ದಿನಾಚರಣೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮೋದಿ ಹೇಳಿಕೆ ಕೊಡಬೇಕು. ಇವರು ಉಕ್ರೇನ್-ರಷ್ಯಾ ಯುದ್ಧವನ್ನೇ ನಿಲ್ಲಿಸಿದವರು. ಯುದ್ಧ ನಿಲ್ಲಿಸಿದ ವಿಶ್ವಗುರು ಮೋದಿ. ಹೀಗಾಗಿ ನಮ್ಮ ದೇಶದ ಯುವಕರ ಬಗ್ಗೆ ಉತ್ತರ ಕೊಡಬೇಕು. ಯಾವಾಗಲೂ ಹೀಗೆ ಆಗಿಲ್ಲ ಮೋದಿ ಅವಧಿಯಲ್ಲಿ ಹೀಗೆ ಆಗಿದೆ. ರಷ್ಯಾದೊಂದಿಗಿನ ಎಲ್ಲಾ ವ್ಯವಹಾರ ನಿಲ್ಲಿಸುತ್ತಿರಾ? ಆಯಿಲ್ ಖರೀದಿ ನಿಲ್ಲಿಸುತ್ತಿರಾ? ಇದಕ್ಕೆ ಬಿಜೆಪಿಗರೇ ಉತ್ತರ ಕೊಡಬೇಕು" ಎಂದು ಆಗ್ರಹಿಸಿದರು.
"ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಮಾತನಾಡಿ, ನನಗೆ ಮಾಹಿತಿ ಇಲ್ಲ. ಅದು ಕ್ಯಾಬಿನೆಟ್ಗೆ ಬಂದಾಗ ಮಾತ್ರ ಮಾಹಿತಿ ಸಿಗುತ್ತದೆ. ಯಾರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಯಾರು ಅನುಕೂಲಕರಸ್ಥರು ಇರುತ್ತಾರೆ. ಅಂತವರನ್ನು ಪರಿಶೀಲಿಸಬೇಕು ಅಂತಾ ಮಾತಿರಬಹುದು. ಆದರೆ ಅದರ ಬಗ್ಗೆ ಮಾಹಿತಿ ಇಲ್ಲ ಕ್ಯಾಬಿನೆಟ್ಗೆ ಬಂದಾಗ ಗೊತ್ತಾಗುತ್ತದೆ" ಎಂದು ಹೇಳಿದರು.
ಧಾರವಾಡ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ವಿಚಾರ ಕುರಿತು ಮಾತನಾಡಿ, "ತಮಟಗಾರಗೆ ಜೀವ ಬೆದರಿಕೆ ಬಂದಿದೆ. ನನಗೆ ಹುಷಾರಿರಲಿಲ್ಲ, ಹೀಗಾಗಿ ಬಂದಿರಲಿಲ್ಲ. ಆದರೆ ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಮಾತನಾಡಿದ್ದೇನೆ. ಆಯುಕ್ತರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಐವರ ಬಂಧನ ಸಹ ಆಗಿದೆ. ಕೇಸ್‌ಗಳನ್ನು ಸಹ ದಾಖಲು ಮಾಡಿದ್ದಾರೆ. ತನಿಖೆ ಮುಂದುವರೆದಿದೆ. ತಪ್ಪಿತಸ್ಥರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಡ್ರಗ್ಸ್ ತೆಗೆದುಕೊಂಡ ಹುಡುಗರು ಬೆದರಿಕೆ ಹಾಕಿರೋ ವಿಚಾರಕ್ಕೆ ಮಾತನಾಡಿ, "ಧಾರವಾಡಕ್ಕೆ ಡ್ರಗ್ಸ್ ಬರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಮಗೆ ಬಂದ ಮಾಹಿತಿ ಪ್ರಕಾರ ಆಂಧ್ರದಿಂದ ಬರುತ್ತಿದೆಯಂತೆ. ಡ್ರಗ್ಸ್ ಬಗ್ಗೆ ಸಾರ್ವಜನಿಕರಲ್ಲೂ ಜವಾಬ್ದಾರಿ ಇದೆ. ಜನಪ್ರತಿನಿಧಿಗಳಷ್ಟೇ ಜನರ ಮೇಲೂ ಜವಾಬ್ದಾರಿ ಇದೆ. ಈ ವಿಷಯದಲ್ಲಿ ಸಾವರ್ಜನಿಕರೂ ಜಾಗೃತರಾಗಬೇಕು. 32 ಸಾವಿರ ಕೋಟಿ ಮೌಲ್ಯದ ಅಫೀಮು ಅಫ್ಘಾನಿಸ್ತಾನದಿಂದ ದೇಶಕ್ಕೆ ಬರುತ್ತಿತ್ತು. ಎಲ್ಲ ಮಲ್ಟಿ ಸೆಕ್ಟರ್ನಿಂದ ಡ್ರಗ್ ಬರುತ್ತಿದೆ. ಮೊನ್ನೆ ಧಾರವಾಡದಲ್ಲಿ ದಿಢೀರ್ ದಾಳಿಗಳನ್ನು ಮಾಡಿದ್ದರು. ದಾಳಿಯಲ್ಲಿ 500 ಜನ ಸಿಕ್ಕಿದ್ದರು. ಅವರನ್ನೆಲ್ಲ ತಪಾಸಣೆ ನಡೆಸಿದಾಗ 350 ಜನರ ರಿಪೋರ್ಟ್ ಪಾಸಿಟಿವ್ ಬಂತು. ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರೂ ಮಾಹಿತಿ ಕೊಡುವ ಕೆಲಸ ಮಾಡಬೇಕು" ಎಂದು ಸಚಿವರು ಮನವಿ ಮಾಡಿದರು.
ಇದನ್ನೂ ಓದಿ: ಅಮ್ಮನ ಹೆಸರಲ್ಲಿ ಒಂದು ಮರ ನೆಡಿ: ಸ್ವಾತಂತ್ರ್ಯೋವದಂದು ರಾಜ್ಯಪಾಲರ ಕರೆ - Karnataka governor address State