ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ಒಂದೆಡೆ, ಜನಜೀವನ ಅಸ್ತವ್ಯಸ್ತಗೊಂಡಿದ್ದರೆ ಮತ್ತೊಂದೆಡೆ, ಕೆರೆ-ಕಟ್ಟೆಗಳು ತುಂಬಿವೆ. ಅದರಲ್ಲೂ, ಚಂದನವನದ ತಾರೆಗಳ ನೆಚ್ಚಿನ ಕೆರೆ ಭರ್ತಿಯಾಗಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿಲೋ ಮೀಟರ್ ದೂರದಲ್ಲಿರುವ ಹಿರೇ ಕೊಳಲೆ ಕೆರೆ ಕೋಡಿ ಬಿದ್ದಿದೆ. ಪ್ರವಾಸಿಗರಿಗೆ ಈ ಕೆರೆ ನೆಚ್ಚಿನ ತಾಣ. ಅಷ್ಟೇ ಅಲ್ಲ, ಚಿಕ್ಕಮಗಳೂರು ನಗರವಾಸಿಗಳಿಗೆ ಕುಡಿಯುವ ನೀರು ಕೂಡಾ ಇಲ್ಲಿಂದಲೇ ಪೂರೈಕೆಯಾಗುತ್ತದೆ.
ನೂರಾರು ಚಲನಚಿತ್ರಗಳು ಕೂಡಾ ಇಲ್ಲಿ ಚಿತ್ರೀಕರಣಗೊಂಡಿವೆ. ಆದರೆ ಕಳೆದ ಕೆಲ ದಿನಗಳ ಹಿಂದಷ್ಟೇ ಕೆರೆ ಸಂಪೂರ್ಣ ಖಾಲಿಯಾಗಿತ್ತು. ಇದೀಗ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಅಬ್ಬರಿಸುತ್ತಿದ್ದು ಹಿರೇ ಕೊಳಲೆ ಕೆರೆ ತುಂಬಿದೆ. ಮೈದುಂಬಿದ ಕೆರೆ ಸೌಂದರ್ಯ ಸವಿಯಲು ಜನರು ಆಗಮಿಸುತ್ತಿದ್ದಾರೆ.
ಕಾಫಿನಾಡಿನ ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತರೀಕೆರೆ ತಾಲೂಕಿನಲ್ಲಿರುವ ಕಲ್ಲತ್ತಿಗರಿ ಜಲಪಾತಕ್ಕೆ ಜೀವಕಳೆ ಬಂದಿದೆ. ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿದೆ ಈ ಜಲಪಾತ. ಕೆಮ್ಮಣ್ಣುಗುಂಡಿ ಗುಡ್ಡಗಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಪಾತಕ್ಕೆ ಯಥೇಚ್ಛ ಪ್ರಮಾಣದಲ್ಲಿ ಜಲಪಾತಕ್ಕೆ ನೀರು ಹರಿದು ಬರುತ್ತಿದೆ.
ಹೆಬ್ಬೆ ಜಲಪಾತವೂ ಮೈದುಂಬಿ ಹರಿಯುತ್ತಿದೆ. 150-200 ಅಡಿ ಎತ್ತರದಿಂದ ಧುಮುಕ್ಕುತ್ತಿರುವ ಜಲಧಾರೆ ನೋಡುವುದು ಪ್ರವಾಸಿಗರಿಗೆ ರೋಮಾಂಚಕ ಅನುಭವ. ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ಮಧ್ಯೆ ಹಾಲ್ನೊರೆಯಂತೆ ಹರಿಯುವ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.