ಬೆಂಗಳೂರು: ಏರ್‌ಪೋರ್ಟ್‌ನಿಂದ ತೆರಳುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕ್ಯಾಬ್ ಚಾಲಕನೊಬ್ಬ ಯಾಮಾರಿಸಿ ಪ್ರತೀ ಪ್ರಯಾಣಕ್ಕೂ 5 ಸಾವಿರ ರೂಪಾಯಿಗೂ ಹೆಚ್ಚು ಬಿಲ್ ಚಾರ್ಜ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 5194/- ಒಂದೇ ಸ್ಕ್ರೀನ್ ಶಾಟ್ ಇಟ್ಟುಕೊಂಡು ಹತ್ತಾರು ಜನರಿಗೆ ವಂಚಿಸಿರುವ ಭರತ್ ಎಂಬ ಚಾಲಕನ ವಿರುದ್ಧ ಏರ್‌ಪೋರ್ಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ವಂಚಿಸುತ್ತಿದ್ದ ಬಗೆ ಹೇಗೆ?: ಸಾಮಾನ್ಯವಾಗಿ ರಾತ್ರಿ ಏರ್‌ಪೋರ್ಟ್‌ನಿಂದ ಕ್ಯಾಬ್ ಬುಕ್ ಮಾಡುತ್ತಿದ್ದ ಪ್ರಯಾಣಿಕರನ್ನು ಆರೋಪಿ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಅವರಿಂದ ಓಟಿಪಿ ಪಡೆದ ಬಳಿಕ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದ. ನಂತರ ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಿ ತನ್ನ ಬಳಿಯಿರುವ 5,194 ರೂಪಾಯಿಯ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ. ಪ್ರಯಾಣಿಕರು ಇದನ್ನು ನೋಡಿ ಇಷ್ಟೊಂದು ಹಣವೇ ಎಂದು ಶಾಕ್ ಆಗುತ್ತಿದ್ದರು. ಆದರೆ ರಾತ್ರಿ ವೇಳೆ ಬೇರೆ ದಾರಿಯಿಲ್ಲದೆ ಹಣ ಪಾವತಿಸುತ್ತಿದ್ದರು. ಅಲ್ಲದೇ ರಾತ್ರಿ ವೇಳೆ ಕ್ಯಾಬ್ ಸಂಸ್ಥೆಯ ಕಸ್ಟಮರ್ ಕೇರ್ ಸಹ ಇಲ್ಲದಿರುವುದನ್ನು ಆರೋಪಿ ತನ್ನ ವಂಚನೆಗೆ ಬಳಸಿಕೊಳ್ಳುತ್ತಿದ್ದ.
ಇದೇ ಮಾದರಿಯಲ್ಲಿ ಹಲವಾರು ಜನರಿಗೆ ವಂಚಿಸಿರುವ ಆರೋಪಿಯ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಠಾಣಾ ಪೊಲೀಸರು ಆರೋಪಿ ಭರತ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಎಚ್ಚರಿಕೆ ವಹಿಸಬೇಕಿದೆ ಪ್ರಯಾಣಿಕರು: ಕ್ಯಾಬ್ ಬುಕ್ ಮಾಡಿದ ಬಳಿಕ, ಚಾಲಕ ಏನೇ ಪುಸಲಾಯಿಸಿದರೂ ಆಫ್‌ಲೈನ್ ಟ್ರಿಪ್ ಒಪ್ಪಿಕೊಳ್ಳಬೇಡಿ. ಓಟಿಪಿ ಹಂಚಿಕೊಂಡ ನಂತರ ನಿಮ್ಮ ಟ್ರಿಪ್ ಚಾಲ್ತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನದ ರಿಜಿಸ್ಟ್ರೇಷನ್ ನಂಬರನ್ನು ಆ್ಯಪ್ನಲ್ಲಿ ಖಚಿತಪಡಿಸಿಕೊಳ್ಳಿ. ಟ್ರಿಪ್ ಮುಗಿದ ಬಳಿಕ ಪ್ರಯಾಣದ ದರವನ್ನು ನಿಮ್ಮ ಆ್ಯಪ್ನಲ್ಲಿಯೂ ಖಚಿತಪಡಿಸಿಕೊಳ್ಳಿ. ಸಾಧ್ಯವಾದರೆ ಆ್ಯಪ್ ಮೂಲಕವೇ ಹಣ ಪಾವತಿಸಿ. ಅನುಮಾನವಿದ್ದಲ್ಲಿ ವಾಹನ ಹಾಗೂ ಚಾಲಕನ ಫೋಟೋ ತೆಗೆದುಕೊಳ್ಳಿ.
ಇದನ್ನೂ ಓದಿ: ಪುತ್ತೂರು: ಉದ್ಯೋಗ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚನೆ, ಮೂವರು ಸೆರೆ