ಮಂಡ್ಯ: ಫೆ.7 ರಂದು ಮಂಡ್ಯ ನಗರ ಬಂದ್ಗೆ ಸಮಾನ ಮನಸ್ಕರ ವೇದಿಕೆ ಕರೆ ಕೊಟ್ಟಿದೆ. ಸೌಹಾರ್ದ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧವಾಗಿ ಈ ನಿರ್ಧಾರ ಮಾಡಿದೆ. ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಸೌಹಾರ್ದ ಪರಂಪರೆಗೆ ಮಸಿ ಬಳಿದು, ಶಾಂತಿ ಮತ್ತು ನೆಮ್ಮದಿ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಬಂದ್ ಮಾಡುವ ಮೂಲಕ ಮಂಡ್ಯ ಜಿಲ್ಲೆಯನ್ನು ಸೌಹಾರ್ದದ ನೆಲೆಯಾಗಿ ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಕೊಡಲು ಪ್ರಗತಿಪರ ಸಂಘಟನೆಗಳು ಮುಂದಾಗಿವೆ.
ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, "ಕಾನೂನು ಮುರಿಯುವ ಮತ್ತು ಶಾಂತಿ ಕದಡುವ ಶಕ್ತಿಗಳ ಮೇಲೆ ಮಂಡ್ಯ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕುರುಬ ಸಮುದಾಯ ನಡೆಸುತ್ತಿರುವ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ಮಾಡಿದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಒಂದು ಸಮುದಾಯ ನಡೆಸುವ ಹಾಸ್ಟೆಲ್‌ಗೆ ಅಕ್ರಮವಾಗಿ ನುಗ್ಗಿ ಧಾಂದಲೆ ನಡೆಸಿ ಫ್ಲೆಕ್ಸ್ ಹರಿದು ಹಾಕುವುದು ಪುಂಡಾಟಿಕೆಯ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಕೆಲಸವಾಗಿದೆ. ಇಂತಹ ಪುಂಡರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು" ಆಗ್ರಹಿಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ಕೃಷ್ಣೇಗೌಡ ಮಾತನಾಡಿ, "ಕೆರಗೋಡು ಹನುಮ ಧ್ವಜ ಪ್ರಕರಣದಲ್ಲಿ ಶಾಸಕರು ಸೇರಿದಂತೆ ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೆ ಎಲ್ಲರ ಮೇಲೂ ಕ್ರಮವಾಗಬೇಕು. ನಾವು ಯಾವುದೇ ಧ್ವಜಕ್ಕೆ ವಿರೋಧ ಮಾಡುತ್ತಿಲ್ಲ. ಒಂದು ಸಮುದಾಯದ ಧ್ವಜ ಹಾಕಿ ಗಲಭೆ ಉಂಟು ಮಾಡುವ ಬದಲು ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಬೇಕಿತ್ತು ಎನ್ನುವ ಜವಾಬ್ದಾರಿ ಮುಖ್ಯವಾಗಬೇಕಿತ್ತು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಬದಲು ಜನರ ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಖಂಡಿಸುತ್ತೇವೆ" ಎಂದರು.
ಲಾಠಿ ಚಾರ್ಜ್ನಿಂದ ಗಾಯಗೊಂಡವರ ಮನೆಗಳಿಗೆ ಭೇಟಿಕೊಟ್ಟ ಬಿಜೆಪಿ ಜಿಲ್ಲಾಧ್ಯಕ್ಷ ಡಾ ಇಂದ್ರೇಶ್: ಮತ್ತೊಂದೆಡೆ, ಕೆರೆಗೋಡು ಹನುಮ ಧ್ವಜ ತೆರವು ಹಾಗೂ ಪಾದಯಾತ್ರೆ ಸಂದರ್ಭದಲ್ಲಿ ಲಾಠಿ ಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹಾಗೂ ತಂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿತು. ಕೆರೆಗೋಡು ಗ್ರಾಮದಲ್ಲಿ 144 ಸೆಕ್ಷನ್ ಮುಂದುವರೆದಿದ್ದು, ಗ್ರಾಮದಲ್ಲಿ KSRP, DAR ತುಕಡಿ ಸೇರಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಜಿಲ್ಲೆಯ ಜನರ ಮನಪರಿವರ್ತನೆ ಮಾಡಲು ಸಾಧ್ಯವಿಲ್ಲ: ಚಲುವರಾಯಸ್ವಾಮಿ