ಹುಬ್ಬಳ್ಳಿ: ಶಕ್ತಿಯುತ ಸರ್ಕಾರ ಇರಬೇಕೆಂದರೆ ಶಕ್ತಿಯುತ ಪ್ರಧಾನಿ ಬೇಕಾಗುತ್ತದೆ. ಅಂತಹ ಶಕ್ತಿಯುತ ಪ್ರಧಾನಿಯೇ ನಮ್ಮ ನರೇಂದ್ರ ಮೋದಿ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.
ನಗರದಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಭಿವೃದ್ಧಿ ಕಾರ್ಯಗಳ ಪ್ರಗತಿಯ ನೋಟ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್ ಇರಲಿ, ಉಕ್ರೇನ್ ಯುದ್ಧ ಸಂದರ್ಭವಾಗಲಿ ಎಲ್ಲವನ್ನೂ ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಆಧುನಿಕ ತಂತ್ರಜ್ಞಾನದಿಂದಾಗಿ ಮುಂದಿನ ಐದು ವರ್ಷ ತುಂಬಾ ಕಷ್ಟದಾಯಕ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೀಪ್ ಫೇಕ್ ಇತ್ಯಾದಿಗಳು ಸಂಕಷ್ಟ ತಂದೊಡ್ದುತ್ತಿವೆ. ಇವುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ್ತಿದೆ ಎಂದರು.
ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಬೇಕಿದೆ. ಆರ್ಥಿಕ ಸ್ಪರ್ಧೆ ಇತ್ಯಾದಿಗಳ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಯನ್ನೂ ಎದುರಿಸಬೇಕಿದೆ. 10 ವರ್ಷದಲ್ಲಿ ಭಾರತ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಎರಡು ಮೂರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜೈಶಂಕರ್ ಅವರು ಐಎಎಸ್ ಅಧಿಕಾರಿಯಾಗಿದ್ದರು. 41 ವರ್ಷ ಸೇವೆ ಸಲ್ಲಿಸಿದ್ದರು. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅಧಿಕಾರಿಗಳನ್ನು ಮಂತ್ರಿ ಮಾಡೋದು ಕಡಿಮೆ. ಆದರೆ ಇವರನ್ನು ನೋಡಿ ಮೋದಿ ಮಂತ್ರಿ ಮಾಡಿದರು. ಇದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದರು.
ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ: ಚಿಕ್ಕೋಡಿಯಲ್ಲಿ ಎಸ್.ಜೈಶಂಕರ್