ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಗಳ ನಡುವೆ ಸಮನ್ವಯದಿಂದ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.
ವಿಕಾಸಸೌಧದಲ್ಲಿ ಇಂದು ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಳಿಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಖಾತಾ ರಹಿತ ಆಸ್ತಿಗಳ ನೋಂದಣಿ ನಿಲ್ಲಿಸಲಾಗಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತಂತೆ ದೀರ್ಘವಾಗಿ ಚರ್ಚಿಸಲಾಯಿತು.
ಜಂಟಿ ಕಾರ್ಯಪಡೆ ಅಧ್ಯಕ್ಷತೆವಹಿಸಿರುವ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರು ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣಾ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡುವಂತೆ ಕಾರ್ಯಪಡೆ ಅಧ್ಯಕ್ಷರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಖಾತಾ ವಿತರಿಸುವಲ್ಲಿ ಭವಿಷ್ಯದಲ್ಲಿ ಎದರಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಂತೆ ನಿರ್ದೇಶನ ನೀಡಿದರು.
ಟಿಡಿಆರ್ಗಳಿಗೂ ಸಹ ಇ-ಖಾತೆ ವಿತರಿಸುವ ಬಗ್ಗೆ ಚರ್ಚೆ: ಸಭೆಯಲ್ಲಿ ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ ಟಿಡಿಆರ್ಗಳನ್ನು ಪುನರ್ ಉಪಯೋಗಿಸದಂತೆ ತಡೆಯಲು, ಟಿಡಿಆರ್ಗಳಿಗೂ ಸಹ ಇ-ಖಾತೆಯನ್ನು ವಿತರಿಸುವ ಬಗ್ಗೆ ಚರ್ಚಿಸಲಾಯಿತು. ಸ್ಥಿರಾಸ್ತಿಗಳ ನೋಂದಣಿಗಾಗಿ, ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇ - ಖಾತೆಗಳನ್ನು ಶೀಘ್ರವಾಗಿ ವಿತರಿಸುವ ಕುರಿತು ಚರ್ಚೆ ನಡೆಯಿತು. ಯೋಜನೆಗಳಿಗೆ ಭೂಮಿ ಬಿಟ್ಟುಕೊಟ್ಟ ಭೂ ಮಾಲೀಕನಿಗೆ ಪರಿಹಾರ ಹಣದ ಬದಲು ಅಭಿವೃದ್ಧಿ ಹಕ್ಕನ್ನು ವರ್ಗಾಯಿಸುವ (ಟಿಡಿಆರ್) ಸಂಬಂಧ ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ TDR ಪುನರ್ ಉಪಯೋಗಿಸಿ ದುರುಪಯೋಗ ಮಾಡಲಾಗುತ್ತಿದೆ. ಅದನ್ನು ತಡೆಯಲು ಟಿಡಿಆರ್ಗೂ ಇ-ಖಾತೆ ಮಾಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಸ್ಥಿರಾಸ್ತಿಗಳ ಸಂಬಂಧ ದಸ್ತಾವೇಜುಗಳ ನೋಂದಣಿಗಾಗಿ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಮತ್ತು ಇ-ಸ್ವತ್ತು ತಂತ್ರಾಂಶವನ್ನು 2014ರಿಂದಲೇ ಸಂಯೋಜನೆಗೊಳಿಸಿದ್ದು, ನೋಂದಣಿಗಾಗಿ ಇ - ಖಾತಾ ಕಡ್ಡಾಯವಾಗಿರುತ್ತದೆ. ಹಾಗಾಗಿ, ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿಗಾಗಿ ಇ-ಖಾತಾ ತುರ್ತಾಗಿ ವಿತರಿಸುವ ಕುರಿತು ಚರ್ಚಿಸಲಾಯಿತು.
ಮಂಗಳೂರು ಮತ್ತು ಇತರ ಕೆಲವು ಕಡೆ ವಿತರಿಸುತ್ತಿರುವ ಇ - ಆಸ್ತಿ ಖಾತೆಗಳಲ್ಲಿ ಸ್ಥಿರಾಸ್ತಿಯ ಅಳತೆಯ ವಿವರಗಳು ನಮೂದಾಗದೇ ಇರುವುದರಿಂದ, ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಕೃಷಿ ಜಮೀನು ಭೂ ಪರಿವರ್ತನೆ ನಂತರ ನಿವೇಶನ ಬಿಡುಗಡೆಗೊಳಿಸುವ ಪೂರ್ವದಲ್ಲಿ ಉದ್ಯಾನವನ (Park), CA ಸೈಟ್ ಮತ್ತು ರಸ್ತೆ ಜಮೀನುಗಳ ಪರಿತ್ಯಾಜನ ಪತ್ರ ನೀಡಲು ಅನುಕೂಲವಾಗುವಂತೆ ಇರುವ ಜಮೀನಿಗೆ ಇ - ಖಾತೆ ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು.
ಒಂದು ಸ್ಥಿರಾಸ್ತಿಯನ್ನು ವಿಭಜಿಸಿ, ಮಾರಾಟ ಮಾಡುವುದಕ್ಕಾಗಿ, ನೋಂದಣಿಗಾಗಿ ಇ-ಖಾತೆಯನ್ನು ವಿಭಜಿಸಬೇಕಾಗಿರುತ್ತದೆ. ವಿಭಜಿತ ಖಾತೆ ಇಲ್ಲದಿದ್ದಲ್ಲಿ ದಸ್ತಾವೇಜು ನೋಂದಣಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು, ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಮಾಲೋಚಿಸಲಾಯಿತು.
ಆಸ್ತಿ ನೋಂದಣಿಯ ನಂತರ XML ದತ್ತಾಂಶವನ್ನು ಇ-ಸ್ವತ್ತಿಗೆ ಕಳುಹಿಸಿದ ನಂತರ ಖಾತೆ ಮಾಡುವ/ತಿರಸ್ಕರಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಡಿಲಿಟ್ ಆಪ್ಶನ್ (Delete Option) ಬಳಸುತ್ತಿರುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಯಿತು.
ಭೂ ಪರಿವರ್ತನೆಯ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್ ಪ್ಲಾನ್‌ಗೆ ಅನುಮತಿ ಪಡೆಯದೆ ಜಮೀನನ್ನು ಮಾರಾಟ ಮಾಡಬೇಕಾಗಿದ್ದಲ್ಲಿ, ಅಂತಹ ಆಸ್ತಿಗಳಿಗೆ ಉಂಡೆ ಖಾತೆ ಮಾಡುವುದು ಹಾಗೂ ಇಂತಹ ಜಮೀನುಗಳನ್ನು ಮಾರಾಟ ಮಾಡುವಾಗ ಮಾರ್ಗಸೂಚಿ ದರ ನಿಗದಿಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.
ಇದನ್ನೂ ಓದಿ: ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಬಗ್ಗೆ ಮತ್ತೆ ಪರಿಶೀಲನೆ: ಗೃಹ ಸಚಿವ ಜಿ.ಪರಮೇಶ್ವರ್