ಬೆಂಗಳೂರು: ಖಾಸಗಿತನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿ ‘ಆಧಾರ್’ ಯೋಜನೆಯನ್ನು ಪ್ರಶ್ನಿಸಿದ್ದ ಮೊದಲ ವ್ಯಕ್ತಿ ಎಂಬ ಖ್ಯಾತಿ ಪಡೆದಿದ್ದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೋಮವಾರ ನಿಧನರಾದರು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪುಟ್ಟಸ್ವಾಮಿ (98) ಅವರು ಬೆಳಿಗ್ಗೆೆ 6 ಗಂಟೆಗೆ ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಸಂಜೆ ನಾಲ್ಕು ಗಂಟೆಗೆ ವಿಲ್ಸನ್ ಗಾರ್ಡನ್‌ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಆಧಾರ್ ಯೋಜನೆಯ ಸಿಂಧುತ್ವ ಪ್ರಶ್ನಿಸಿದ್ದ ನ್ಯಾ.ಪುಟ್ಟಸ್ವಾಮಿ 2012ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು 2017ರಲ್ಲಿ ಕೋರ್ಟ್ ಹೇಳಿತ್ತು. ಆದರೆ, ಆಧಾರ್ ಯೋಜನೆಯನ್ನು ಎತ್ತಿ ಹಿಡಿದಿತ್ತು. ಇದಕ್ಕಾಗಿ ಪುಟ್ಟಸ್ವಾಮಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.
ಮೂಲತಃ ಬೆಂಗಳೂರು ಬಳಿಯ ಗ್ರಾಮವೊಂದರಲ್ಲಿ 1926ರ ಫೆಬ್ರವರಿಯಲ್ಲಿ ಪುಟ್ಟಸ್ವಾಮಿ ಜನಿಸಿದ್ದರು. ಮೈಸೂರು ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿ 1952ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಅವರು, 1977ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
1986ರವರೆಗೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ನಂತರ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಬೆಂಗಳೂರು ಪೀಠದ ಮೊದಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಆಂಧ್ರ ಪ್ರದೇಶದ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ಬಿಜೆಪಿ ಟಿಕೆಟ್ ವಂಚನೆ ಆರೋಪ ಪ್ರಕರಣ: ಗೋಪಾಲ ಜೋಶಿ ಬಿಡುಗಡೆಗೆ ಹೈಕೋರ್ಟ್ ಸೂಚನೆ